ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ

Public TV
2 Min Read
sri lanka diesel

ಕೊಲಂಬೊ: ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತ್ಯಂತ ಅಗತ್ಯ ಆಮದುಗಳಿಗೆ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆ ಕಾರಣದಿಂದಾಗಿ ದೇಶಾದ್ಯಂತ ಗುರುವಾರ ಡೀಸೆಲ್‌ ಮಾರಾಟ ಸ್ಥಗಿತಗೊಂಡಿದೆ.

ಶ್ರೀಲಂಕಾ ದೇಶದಾದ್ಯಂತ ಗುರುವಾರ ಡೀಸೆಲ್ ಮಾರಾಟವಾಗಲಿಲ್ಲ. ಸುಮಾರು 2.2 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದನ್ನೂ ಓದಿ: ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

SRILANKA

ದಕ್ಷಿಣ ಏಷ್ಯಾದ ರಾಷ್ಟ್ರವು ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಸ್‌ ಮತ್ತು ವಾಣಿಜ್ಯ ವಾಹನಗಳಿಗೆ ಡೀಸೆಲ್‌ ಅತ್ಯಗತ್ಯ ಇಂಧನವಾಗಿದೆ. ಆದರೆ ಬಂಕ್‌ಗಳಲ್ಲಿ ಡೀಸೆಲ್‌ ಮಾರಾಟ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್‌ ಮಾರಾಟವಾಗುತ್ತಿದೆ. ಆದರೆ ಪೂರೈಕೆ ಕಡಿಮೆಯಾಗಿದೆ. ಪರಿಣಾಮವಾಗಿ ಜನರು ತಮ್ಮ ಕಾರುಗಳನ್ನು ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಲ್ಲಿಸಿ ತೊಂದರೆ ಅನುಭವಿಸುವಂತಾಗಿದೆ.

ರಿಪೇರಿಗಾಗಿ ಗ್ಯಾರೇಜ್‌ನಲ್ಲಿರುವ ಬಸ್‌ಗಳಿಂದ ನಾವು ಇಂಧನವನ್ನು ಹೊರತೆಗೆಯುತ್ತೇವೆ. ಆ ಡೀಸೆಲ್‌ನ್ನು ಅಗತ್ಯ ಸೇವೆಯ ವಾಹನಗಳನ್ನು ಚಲಾಯಿಸಲು ಬಳಸುತ್ತೇವೆ ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.

SRILANKA 1

ಖಾಸಗಿ ಬಸ್‌ಗಳ ಮಾಲೀಕರು ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಮೂರನೇ ಎರಡು ಭಾಗದಷ್ಟು ಹೊಂದಿದ್ದಾರೆ. ಅವರ ಬಳಿಯೂ ಇಂಧನ ಖಾಲಿಯಾಗಿದೆ. ಶುಕ್ರವಾರದಿಂದ ಸಾರಿಗೆ ಸೇವೆ ಅಸಾಧ್ಯ ಎಂದು ಹೇಳುತ್ತಿದ್ದಾರೆ.

ನಮ್ಮ ಡೀಸೆಲ್‌ ದಾಸ್ತಾನನ್ನು ಬಳಸಿ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಇಂದು ಸಂಜೆಯೊಳಗೆ ನಮಗೆ ಡೀಸೆಲ್‌ ಸರಬರಾಜು ಆಗದಿದ್ದರೆ ಬಸ್‌ಗಳ ಕಾರ್ಯಾಚರಣೆ ಅಸಾಧ್ಯವಾಗುತ್ತದೆ ಎಂದು ಖಾಸಗಿ ಬಸ್‌ ನಿರ್ವಾಹಕರ ಸಂಘದ ಅಧ್ಯಕ್ಷ ಗೆಮುನು ವಿಜೆರತ್ನೆ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಸ್ಥಿತಿ ಗಂಭೀರ – ದಿನ ಬಳಕೆ ವಸ್ತುಗಳ ಬೆಲೆ ಎಷ್ಟು?

Petrol Diesel

ಜನರೇಟರ್‌ಗಳಿಗೆ ಡೀಸೆಲ್‌ ಇಲ್ಲ. ಹೀಗಾಗಿ ಗುರುವಾರದಿಂದ 13 ಗಂಟೆಗಳ ಕಾಲ ದೇಶದಲ್ಲಿ ವಿದ್ಯುತ್‌ ಕಡಿತ ಜಾರಿಗೊಳಿಸಬೇಕಾಯಿತು. ಡೀಸೆಲ್‌ ಸರಬರಾಜು ಮಾಡುವ ಭರವಸೆ ನೀಡಿದ್ದಾರೆ. ಬಳಿಕ ವಿದ್ಯುತ್‌ ಕಡಿತದ ಅವಧಿಯನ್ನು ಕಡಿಮೆ ಮಾಡಬಹುದಾಗಿದೆ ಎಂದು ವಿದ್ಯುತ್‌ ಸರಬರಾಜು ಇಲಾಖೆ ತಿಳಿಸಿದೆ.

ಶ್ರೀಲಂಕಾ ತನ್ನ 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ತೀರಿಸಲು ಅಗತ್ಯವಾದ ವಿದೇಶಿ ಕರೆನ್ಸಿಯನ್ನು ಉಳಿಸುವ ಪ್ರಯತ್ನದಲ್ಲಿ ಮಾರ್ಚ್ 2020ರಲ್ಲಿ ವಿಶಾಲ ಆಮದು ನಿಷೇಧವನ್ನು ವಿಧಿಸಿತು. ಆದರೆ ಇದು ಅಗತ್ಯ ವಸ್ತುಗಳ ವ್ಯಾಪಕ ಕೊರತೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *