ಕೊಲಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಅನಿರೀಕ್ಷಿತ ತಿರುವುಗಳ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಕುಟುಂಬ ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೂ ರಾಜೀನಾಮೆ ನೀಡುವುದಿಲ್ಲ ಎಂದು ಸುಳಿವು ನೀಡಿರುವುದಾಗಿ ವರದಿಯಾಗಿದೆ.
3 ದಿನಗಳ ಹಿಂದೆ ರಾಜಪಕ್ಸೆ ಅವರು ಸ್ಪೀಕರ್ ಜೊತೆ ಮಾತನಾಡಿ ಬುಧವಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಆದರೆ ಅದರ ಬಳಿಕ ಅವರು ರಾಜೀನಾಮೆ ನೀಡುವ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ.
ರಾಜಪಕ್ಸೆ ತಮ್ಮ ರಾಜೀನಾಮೆಯನ್ನು ನೀಡುವುದಕ್ಕೂ ಮೊದಲು ದೇಶವನ್ನು ತೊರೆಯಲು ಹಾಗೂ ತಮ್ಮ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಬಯಸುತ್ತಾರೆ ಎಂದು ವರದಿಯಾಗಿದೆ. ಆದರೆ ಅವರ ಸಹೋದರ ಬೆಸಿಲ್ ರಾಜಪಕ್ಸೆ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಇಲಾಖೆ ಹಾಗೂ ನಿಲ್ದಾಣದ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ
ಗೊಟಬಯ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡದೇ ಹೋದಲ್ಲಿ ರಾಜಧಾನಿ ಕೊಲಂಬೋದಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಶನಿವಾರ ರಾಜಪಕ್ಸೆಯವರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ದೇಶದ ಆರ್ಥಿಕತೆ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ರಾಜಪಕ್ಸೆ ತಮ್ಮ ನಿವಾಸ ತೊರೆದು ಪಲಾಯನಗೈದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 891 ಕೊರೊನಾ ಕೇಸ್ – ಉತ್ತರ ಕನ್ನಡದಲ್ಲಿ 1 ಮರಣ ಪ್ರಕರಣ ದಾಖಲು