Connect with us

Cricket

ಪಾಕ್ ಸಚಿವರ ಹೇಳಿಕೆಗೆ ಶ್ರೀಲಂಕಾ ಟಾಂಗ್

Published

on

ಕೊಂಲಬೋ: ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾ ಕ್ರಿಕೆಟಿಗರು ಭಾಗವಹಿಸದಿರಲು ಭಾರತ ಕಾರಣ ಎಂದು ಆರೋಪ ಮಾಡಿದ್ದ ಪಾಕ್‍ಗೆ ಶ್ರೀಲಂಕಾ ಕ್ರೀಡಾ ಸಚಿವರು ತಿರುಗೇಟು ನೀಡಿದ್ದು, ಆಟಗಾರರು ಸರಣಯಿಂದ ಹಿಂದೆ ಸರಿಯಲು ನೀವೇ ಕಾರಣ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಟೂರ್ನಿಯಲ್ಲಿ ನಾವು ಆಡಲ್ಲ ಎಂದು ಶ್ರೀಲಂಕಾದ ಕೆಲ ಆಟಗಾರ ಹೇಳಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿ ಕುತಂತ್ರಿ ಬುದ್ಧಿ ತೋರಿದ್ದ ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಲಂಕಾ ಆಟಗಾರ ಈ ನಿಲುವಿಗೆ ಭಾರತ ಕಾರಣ ಎಂದು ಆರೋಪ ಮಾಡಿದ್ದರು.

ಪಾಕ್ ಸಚಿವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೊ, ನಮ್ಮ ದೇಶದ ಆಟಗಾರರು ತೆಗೆದುಕೊಂಡಿರುವ ನಿರ್ಧಾರದ ಮೇಲೆ ಭಾರತ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ನಮ್ಮ ಆಟಗಾರ ನಿಲುವಿಗೆ ಪಾಕಿಸ್ತಾನವೇ ಕಾರಣ. 2009 ರಲ್ಲಿ ಆದ ಘಟನೆಯನ್ನು ಮುಂದೆ ಇಟ್ಟಿಕೊಂಡು ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಕೆಲ ಆಟಗಾರರು ಸಮ್ಮತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಹರಿನ್, ಪಾಕಿಸ್ತಾನದಲ್ಲಿ ಆಡಬಾರದೆಂದು ಶ್ರೀಲಂಕಾದ ಆಟಗಾರರನ್ನು ಭಾರತ ಪ್ರಭಾವಿಸಿದೆ ಎಂಬುದರಲ್ಲಿ ಸತ್ಯವಿಲ್ಲ. 2009ರ ಘಟನೆಯ ಆಧಾರದ ಮೇಲೆ ಸಂಪೂರ್ಣವಾಗಿ ನಾವು ಆಡುವುದಿಲ್ಲ ಎಂದು ಕೆಲವರು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸಿ ನಾವು ಪಾಕ್‍ನಲ್ಲಿ ಆಟವಾಡಲು ಸಿದ್ಧರಿರುವ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ನಮ್ಮಲ್ಲಿ ಇರುವ ಆಟಗಾರಲ್ಲಿ ಒಳ್ಳೆಯ ಮತ್ತು ಶಕ್ತಿಯೂತ ತಂಡವನ್ನು ಆಯ್ಕೆ ಮಾಡಿದ್ದೇವೆ ಮತ್ತು ಪಾಕಿಸ್ತಾನದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಭರವಸೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

2009 ರಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಏಕದಿನ ತಂಡದ ನಾಯಕ ದಿಮುತ ಕರುಣಾರತ್ನೆ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿ ಭದ್ರತಾ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆಟಗಾರರ ಈ ತೀರ್ಮಾನದಿಂದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿತ್ತು. ಪಾಕ್ ಸಚಿವ ಭಾರತ ವಿರುದ್ಧ ಟ್ವೀಟ್ ಮಾಡಿ ಈಗ ಪೆಟ್ಟು ತಿಂದಿದ್ದಾರೆ.

ಪಾಕ್ ಸಚಿವ ಹೇಳಿದ್ದೇನು?
ಪಾಕಿಸ್ತಾನದಲ್ಲಿ ಟೂರ್ನಿ ಆಡಿದರೆ ಶ್ರೀಲಂಕಾ ಆಟಗಾರನ್ನು ಐಪಿಎಲ್ ನಿಂದ ಹೊರ ಹಾಕುತ್ತೇವೆ ಎಂದು ಭಾರತ ಲಂಕಾ ಆಟಗಾರರ ಮೇಲೆ ಒತ್ತಡ ಹಾಕುತ್ತಿದೆ ಎಂದು ನಮಗೆ ಮಾಹಿತಿ ಬಂದಿದೆ. ಈ ರೀತಿ ಮಾಡುತ್ತಿರುವುದು ಭಾರತ ಕ್ರೀಡಾಧಿಕಾರಿಗಳ ನೀಚ ಕೃತ್ಯ ಎಂದು ಪಾಕ್‍ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಟ್ವೀಟ್ ಮಾಡಿದ್ದರು.

ಭಯೋತ್ಪಾದಕ ದಾಳಿ: 2009 ರ ಮಾರ್ಚ್‍ನಲ್ಲಿ ಪಾಕಿಸ್ತಾನದ ಲಹೋರಿನ ಗಡಾಫಿ ಮೈದಾನದಲ್ಲಿ ಪಾಕಿಸ್ತಾನ ಮತ್ತು ಲಂಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ 12 ಮಂದಿ ಭಯೋತ್ಪಾದಕರು ಶ್ರೀಲಂಕಾ ಆಟಗಾರರು ತೆರಳುತ್ತಿದ್ದ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 8 ಮಂದಿ ಪೊಲೀಸರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯೂ ಗಾಯಗೊಂಡಿದ್ದರು.

ಆ ಬಳಿಕ 2017 ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದರೆ ಈ ಭಾರಿಯ ಪಾಕ್ ಸರಣಿ ಆಡಲು ಕೆಲ ಆಟಗಾರರು ನಿರಾಕರಿಸಿದ್ದಾರೆ. ಸೆಪ್ಟೆಂಬರ್ 27, 29 ಮತ್ತು ಅಕ್ಟೋಬರ್ 3 ರಂದು ಕರಾಚಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 5, 7 ಮತ್ತು 9 ರಂದು ಲಾಹೋರ್‍ನಲ್ಲಿ 3 ಟಿ-20 ಪಂದ್ಯಗಳು ನಡೆಯಲಿದೆ.

Click to comment

Leave a Reply

Your email address will not be published. Required fields are marked *