ಕೊಲಂಬೋ: ಸರಣಿ ಬಾಂಬ್ ದಾಳಿ ನಡೆದ ನಂತರ ಶ್ರೀಲಂಕಾ ಸರ್ಕಾರ ಬುರ್ಕಾ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಹ ವಸ್ತ್ರ ಧರಿಸುವುದನ್ನು ನಿಷೇಧಿಸಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಸೋಮವಾರ ಈ ಆದೇಶವನ್ನು ಹೊರಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳುವ ವಸ್ತ್ರವನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Advertisement
ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಪೂರ್ಣ ವಸ್ತ್ರವನ್ನು ಧರಿಸಿದರೆ ಸೇನಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಮುಖವನ್ನು ಮುಚ್ಚಿಕೊಳ್ಳುವ ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement
Advertisement
ಶ್ರೀಲಂಕಾ ಸಂಸತ್ ಸದಸ್ಯರು ದೇಶದ ರಕ್ಷಣೆ ಸಂಬಂಧ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯ ಬೆನ್ನಲ್ಲೇ ಅಧ್ಯಕ್ಷರು ಈ ಆದೇಶ ಜಾರಿ ಮಾಡಿದ್ದಾರೆ.
Advertisement
ಐಸಿಸ್ ಉಗ್ರರ ದಾಳಿ ಬಳಿಕ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿದ್ದು ಹೈ ಅಲರ್ಟ್ ಘೋಷಣೆಯಾಗಿದೆ. ಭಾನುವಾರ ಶ್ರೀಲಂಕಾದ ಪ್ರಮುಖ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿತ್ತು.
ಸರಣಿ ಬಾಂಬ್ ಸ್ಫೋಟದ ಬಳಿಕ ಒಟ್ಟು 150 ಮಂದಿಯನ್ನು ಬಂಧಿಸಿದ್ದಾರೆ. ಲಂಕಾದ ಭದ್ರತಾ ಪಡೆ ಇನ್ನೂ ನಾಪತ್ತೆಯಾಗಿರುವ 140 ಮಂದಿಯ ಹುಡುಕಾಟದಲ್ಲಿ. ನಾಪತ್ತೆಯಾದ ವ್ಯಕ್ತಿಗಳು ಐಸಿಸ್ ಬೆಂಬಲಿಗರು ಮತ್ತು ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿದ್ದಾರೆ ಎಂದು ವರದಿಯಾಗಿದೆ.
ದೇಶಾದ್ಯಂತ ಒಟ್ಟು 10 ಸಾವಿರ ಸೈನಿಕರನ್ನು ಸರ್ಕಾರ ಭದ್ರತೆಗೆ ನಿಯೋಜಿಸಿದೆ. ವಾಣಿಜ್ಯ ಕಟ್ಟಡಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಬಾಂಬ್ ದಾಳಿಯ ನಂತರ ಸ್ಥಗಿತಗೊಂಡಿದೆ.
ಬುರ್ಕಾವನ್ನು ನಿಷೇಧ ಮಾಡಿದ ದೇಶಗಳ ಪೈಕಿ ಶ್ರೀಲಂಕಾ ಮೊದಲನೆಯದ್ದಲ್ಲ. ಈಗಾಗಲೇ ವಿಶ್ವದ 13 ದೇಶಗಳಲ್ಲಿ ಬುರ್ಕಾ ನಿಷೇಧಗೊಂಡಿದೆ. 2010ರಲ್ಲಿ ಉಗ್ರರ ದಾಳಿ ಬಳಿಕ ಫ್ರಾನ್ಸ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸಿತ್ತು. ನಂತರ ಬೆಲ್ಜಿಯಂ, ನೆದರ್‍ಲ್ಯಾಂಡ್ ಸರ್ಕಾರಗಳು ಬುರ್ಕಾ ನಿಷೇಧಿಸಿತ್ತು.