ಸಿಡ್ನಿ: ಶ್ರೀಲಂಕಾದ ವೇಗದ ಬೌಲರ್ ಕಸುನ್ ರಾಜಿತಾ ಅವರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಅವರ ಶತಕದ ಸಹಾಯದಿಂದ ಒಟ್ಟು 233 ರನ್ ಗಳಿಸಿತು. ಈ ಇನ್ನಿಂಗ್ಸ್ ನಲ್ಲಿ ಲಂಕಾ ಬೌಲರ್ ಗಳ ಬೆವರಿಳಿಸಿದ ಆಸ್ಟ್ರೇಲಿಯಾ ದಾಂಡಿಗರು, ಕಸುನ್ ರಾಜಿತಾ ಅವರಿಗೆ ಒಟ್ಟು 4 ಓವರ್ ಗಳಲ್ಲಿ ಬರೋಬ್ಬರಿ 75 ರನ್ ಚಚ್ಚಿದರು.
Advertisement
Advertisement
ಕಸುನ್ ರಾಜಿತಾ ಅವರು ಮಾಡಿದ ನಾಲ್ಕು ಓವರ್ ಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್ ಮ್ಯಾನ್‍ಗಳು, ರಾಜಿತಾ ಅವರು ಎಸೆದ 24 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಮೇತ ಒಟ್ಟು 75 ರನ್ ಬಾರಿಸಿದರು. ಇದಕ್ಕು ಮುನ್ನಾ ಟರ್ಕಿ ಬೌಲರ್ ತುನಾಹನ್ ತಹರ್ ಅವರು ಒಂದು ಟಿ-20 ಪಂದ್ಯದಲ್ಲಿ 70 ರನ್ ನೀಡಿ ದುಬಾರಿ ಬೌಲರ್ ಆಗಿದ್ದರು. ಆದರೆ ಈಗ ಈ ದಾಖಲೆಯನ್ನು ರಾಜಿತಾ ಅವರು ತಳ್ಳಿ ಹಾಕಿದ್ದಾರೆ.
Advertisement
ಇಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ 56 ಎಸೆತದಲ್ಲಿ 100 (10 ಬೌಂಡರಿ 4 ಸಿಕ್ಸರ್ ), ನಾಯಕ ಆರೋನ್ ಪಿಂಚ್ 36 ಎಸೆತದಲ್ಲಿ 66 (8 ಬೌಂಡರಿ, 3 ಸಿಕ್ಸರ್) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 28 ಎಸೆತದಲ್ಲಿ 62 (7 ಬೌಂಡರಿ, 3 ಸಿಕ್ಸರ್) ಸಹಾಯದಿಂದ ಎರಡು ವಿಕೆಟ್ ನಷ್ಟಕ್ಕೆ 233 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.
Advertisement
ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದ ಲಂಕಾ ಬ್ಯಾಟ್ಸ್ ಮ್ಯಾನ್‍ಗಳು ಆಡಮ್ ಜಂಪಾ ಮತ್ತು ಮಿಚಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 99 ರನ್‍ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 134 ರನ್‍ಗಳ ಬೃಹತ್ ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.