ಕೊಲಂಬೋ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆಸಿದ್ದು ನ್ಯಾಷನಲ್ ತೌಹೀತ್ ಜಮಾತ್(ಜೆಎನ್‍ಟಿ) ಸಂಘಟನೆಯ ಸದಸ್ಯರು ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಭಾನುವಾರ ಸ್ಫೋಟ ನಡೆದ ಬಳಿಕ ಯಾವೊಂದು ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಈಗ ಶ್ರೀಲಂಕಾದ ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರರಾದ ರಜಿತಾ ಸೆನೆರತ್ನೆ ಈ ಕೃತ್ಯವನ್ನು ಜೆಎನ್‍ಟಿ ಸಂಘಟನೆ ನಡೆಸಿದೆ. ಶ್ರೀಲಂಕಾದ ಪ್ರಜೆಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಘಟನೆಗೆ ಅಂತರಾಷ್ಟ್ರೀಯ ಸಂಬಂಧ ಇರುವ ಸಾಧ್ಯತೆ ಇರಬಹುದು ಎಂದು ಶಂಕಿಸಿದ್ದಾರೆ. 8 ಬಾಂಬ್ ಸ್ಫೋಟದ ಸಂಬಂಧ ಇಲ್ಲಿಯವರೆಗೂ 24 ಮಂದಿಯನ್ನು ಬಂಧಿಸಲಾಗಿದೆ.
Advertisement
ಶ್ರೀಲಂಕಾದಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರದಲ್ಲಿ ಇರುವಂತೆ ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
Advertisement
Advertisement
ಏನಿದು ಎನ್‍ಟಿಜೆ?
2014ರಲ್ಲಿ ಶ್ರೀಲಂಕಾದಲ್ಲಿ ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಸ್ಥಾಪನೆಯಾಗಿದೆ. ಮುಸ್ಲಿಮರು ಹೆಚ್ಚಾಗಿ ನೆಲೆಸಿರುವ ಪೂರ್ವ ಭಾಗದ ಕಟ್ಟನ್‍ಕುಡಿಯಲ್ಲಿ ಈ ಸಂಘಟನೆ ತಲೆ ಎತ್ತಿದೆ. ಈ ಸಂಘಟನೆ ಕ್ರಾಂತಿಕಾರವಾಗಿ ಷರಿಯಾ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಮಹಿಳೆಯರು ಬುರ್ಕಾವನ್ನು ಮಾತ್ರ ಧರಿಸಬೇಕು ಎಂದು ಬೋಧಿಸುತ್ತಿದೆ.
Advertisement
ಕ್ರಾಂತಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದ ಈ ಸಂಘಟನೆ ಕೆಲಸಗಳು ಬೆಳಕಿಗೆ ಬಂದಿರಲಿಲ್ಲ. ಕಳೆದ ವರ್ಷ ಶ್ರೀಲಂಕಾದಲ್ಲಿ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಸಂಘಟನೆಯ ಹೆಸರು ಪ್ರಚಲಿತಕ್ಕೆ ಬಂತು. ಈ ಸಂಘಟನೆಯ ಕೃತ್ಯದಿಂದಾಗಿ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಗಲಾಟೆ ನಡೆಯಲು ಆರಂಭಗೊಂಡಿತ್ತು.
2017ರಲ್ಲಿ ಎನ್‍ಟಿಜೆ ಸಂಘಟನೆ ಬುದ್ಧನ ಬಗ್ಗೆ ದ್ವೇಷ ಕಾರುವ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋದಿಂದಾಗಿ ಲಂಕಾದಲ್ಲಿ ಸಿಂಹಳಿಯರಿಗೆ ಮತ್ತು ಬೌದ್ಧರ ಭಾವನೆಗಳಿಗೆ ಧಕ್ಕೆಯಾಗಿತ್ತು.
ಬಾಂಬ್ ಸ್ಫೋಟಕ್ಕೆ ಸಂಬಂಧ ಏನು?
ಭಾನುವಾರ ಶಾಂಗ್ರಿಲಾ ಹೋಟೆಲ್‍ನಲ್ಲಿ ಆತ್ಮಹುತಿ ಬಾಂಬ್ ದಾಳಿ ನಡೆಸಿದ ವ್ಯಕ್ತಿಯನ್ನು ಮೌಲ್ವಿ ಝರಂ ಹಶೀಂ ಎಂದು ಗುರುತಿಸಲಾಗಿದೆ. ಈತ ಎಲ್ಲ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದು, ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆಯಲ್ಲಿ ಉಪನ್ಯಾಸಕನಾಗಿದ್ದ.
ನಾವು ಕೃತ್ಯ ಎಸಗಿಲ್ಲ:
ಶ್ರೀಲಂಕಾ ಸರ್ಕಾರ ಈ ಕೃತ್ಯವನ್ನು ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಎಸಗಿದೆ ಎಂದು ದೃಢಪಡಿಸಿದರೂ ಈ ಸಂಘಟನೆ ಕೃತ್ಯವನ್ನು ಖಂಡಿಸಿದೆ. ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ದೇಶಕ್ಕೆ ಸಹಾಯ ಮಾಡಲು ನಮ್ಮ ಸಂಘಟನೆ ಸಿದ್ಧವಿದೆ ಎಂದು ತಿಳಿಸಿದೆ. ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಭಾನುವಾರ ಕ್ಯಾಂಡಿಯಲ್ಲಿ ತಾನು ಆಯೋಜಿಸಿದ್ದ ರಕ್ತದಾನ ಶಿಬಿರದ ಫೋಟೋವನ್ನು ಹಂಚಿಕೊಂಡಿದೆ.
10 ದಿನದ ಮೊದಲೇ ಮಾಹಿತಿ ಸಿಕ್ಕಿತ್ತು:
ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.
ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. “ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿತ್ತು.