ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಕಳ್ಳಾಟ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧದ ಅಡಿ ಪರಿಗಣಿಸುವ ಕಾಯ್ದೆಗೆ ಶ್ರೀಲಂಕಾ ಸಂಸತ್ ಅನುಮೋದನೆ ನೀಡಿದೆ.
ಕಳೆದ ಕೆಲ ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಹಾಗೂ ಕ್ರೀಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಸಂಕಷ್ಟ ಎದುರಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಯಮಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಸದ್ಯ ಈ ಪ್ರಸ್ತಾವನೆಗಳನ್ನು ಸ್ವೀಕರಿಸಿರುವ ಸರ್ಕಾರ ಪಾರ್ಲಿಮೆಂಟ್‍ನಲ್ಲಿ ಮಸೂದೆಗೆ ಅನುಮೋದನೆ ನೀಡಿದೆ.
Advertisement
Advertisement
ಹೊಸ ಕಾಯ್ದೆಯ ಅನ್ವಯ ಕ್ರೀಡಾ ಕಳ್ಳಾಟ, ಭ್ರಷ್ಟಾಚಾರ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿ ತನಿಖೆ ನಡೆಸುವುದು ಹಾಗೂ ಇಂತಹ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
Advertisement
ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೋ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿದರು. ಈ ಕಾಯ್ದೆಗೆ ಸಚಿವ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬೆಂಬಲ ನೀಡಿದ್ದರು. ಈ ಕಾಯ್ದೆಯನ್ನು ಜಾರಿ ಮಾಡಲು ಕ್ರೀಡಾ ಸಚಿವಾಲಯ ಐಸಿಸಿಯೊಂದಿಗೆ ಮಾತುಕತೆ ನಡೆಸಿತ್ತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಮಾತ್ರವಲ್ಲದೇ ಈ ಇದಕ್ಕೆ ನೆರವು ನೀಡುವ ವ್ಯಕ್ತಿಗಳಿಗೂ ಶಿಕ್ಷೆ ನೀಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡದ ಈಗಿನ ಆಟಗಾರರು ಮಾತ್ರವಲ್ಲದೇ ಮಾಜಿ ಆಟಗಾರರಿಗೂ ಈ ಕಾಯ್ದೆ ಅನ್ವಯವಾಗುತ್ತದೆ.