ತುಮಕೂರು: ಪ್ರವಾಸಿಗರ ಸ್ವರ್ಗ, ಯಾತ್ರಾರ್ಥಿಗಳ ಆತ್ಮ ಎಂದೇ ಕರೆಯಿಸಿಕೊಳ್ಳುವ ತಾಲೂಕಿನ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಇಂದು ಸಾವಿರಾರು ಸಂಖ್ಯೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.
Advertisement
Advertisement
ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡು ಬಂದಿತು. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.
Advertisement
ಡಿಡಿ ಹಿಲ್ಸ್ ಎಂದೇ ಖ್ಯಾತಿಯಾಗಿರುವ ಈ ಅರಣ್ಯ ಪ್ರದೇಶ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಬೆಟ್ಟ ಗುಡ್ಡಗಳ ಈ ತಾಣದ ನಡುವೆ ನರಸಿಂಹ ಸ್ವಾಮಿ ದೇವಾಲಯ ಇದೆ. ಹಾಗಾಗಿ ಈ ಜಾತ್ರೆ ಪ್ರಾಮುಖ್ಯತೆ ಪಡೆದುಕೊಂಡಿದೆ.