International
ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

ಉಡುಪಿ: ದೂರದ ಅಮೆರಿಕದಲ್ಲಿ ಕೃಷ್ಣನಾದ ಮೊಳಗಿದೆ. ಡೋನಾಲ್ಡ್ ಟ್ರಂಪ್ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅವತಾರ ಪುರುಷನ ನಿತ್ಯ ದರುಶನ ಪಡೆಯಬೇಕೆಂಬ ಆಸೆ ನನಸಾಗಿದೆ.
ಉಡುಪಿಯ ಪುತ್ತಿಗೆ ಮಠಾಧೀಶರು ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ವಿಶೇಷ ಅಂದ್ರೆ 7 ಕೋಟಿ ರೂಪಾಯಿ ಕೊಟ್ಟು ಹಳೆಯ ಚರ್ಚ್ ಖರೀದಿಸಿ ಅದನ್ನು ಕೃಷ್ಣ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ದೇಗುಲದಲ್ಲಿ ಸಾಲಿಗ್ರಾಮ ಕಲ್ಲಿನಿಂದ ಕೆತ್ತಲಾಗಿರುವ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಮುಖ್ಯಪ್ರಾಣ ದೇವರ ಗುಡಿ, ರಾಘವೇಂದ್ರ ಗುರುಸಾರ್ವಭೌಮರ ವೃಂದಾವನವೂ ಇದೆ.
ತಜ್ಞ ಶಿಲ್ಪಿಗಳ ಸುಮಾರು ಒಂದು ವರ್ಷದ ಕೈಚಳಕದಲ್ಲಿ ವಿಶೇಷ ಕೆತ್ತನೆಗಳುಳ್ಳ ಭವ್ಯ ದೇಗುಲ ನಿರ್ಮಾಣವಾಗಿದೆ. ಭಾಗವತದಲ್ಲಿ ವರ್ಣಿಸಿದ ಕೃಷ್ಣನ ಲೀಲೆಗಳನ್ನು ಕೆತ್ತಲಾಗಿದ್ದು, ಬೇಲೂರು-ಹಳೇಬೀಡಿನಲ್ಲಿರುವ ದೇವಸ್ಥಾನದಂತೆ ಆಕರ್ಷಿಸುತ್ತಿದೆ. ಒಂದು ವಾರಗಳ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿವೆ.
