– ಇದು ಕಾನೂನುಬಾಹಿರ ನಡೆ; ಯದುವೀರ್
– ಚಾಮುಂಡಿ ಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ಸರ್ಕಾರ ಮತ್ತು ರಾಜಮನೆತನದ ನಡುವೆ ಸಂಘರ್ಷ ಮುಂದುವರೆದಿದೆ.
Advertisement
ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗೆ ಪ್ರಮೋದಾದೇವಿ ಕೋರ್ಟ್ ತಡೆಯಾಜ್ಞೆ ತಂದಿದ್ದರು. ಆದರೆ ಆಗಸ್ಟ್ 22ರಂದು ಸರ್ಕಾರ ತಡೆಯಾಜ್ಞೆ ತೆರವು ಮಾಡಿಸಿತ್ತು. ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿ, ಪ್ರಾಧಿಕಾರದ ಮೊದಲ ಸಭೆ ನಡೆಸಿದರು.
Advertisement
ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಸ್ವಚ್ಛತೆ, ಭದ್ರತೆಗೆ ಸಂಬಂಧಿಸಿದಂತೆ ಹಲವು ಆದೇಶ ನೀಡಿ ದೇಗುಲದೊಳಗೆ ಮೊಬೈಲ್ ಬಳಕೆಯನ್ನು ನಿಷೇಧಿಸಿದರು.
Advertisement
Advertisement
Shree Chamundeshwari Kshetra Development Authority Act, 2024 under legal challenge in K’taka HC. Interim order has been ignored and the meeting scheduled today. I urge all to respect legal process & maintain status quo until Sept 5th.#UpholdLaw pic.twitter.com/NQP1yX5rds
— Yaduveer Wadiyar (@yaduveerwadiyar) September 3, 2024
ಈ ಸಭೆ ಕಾನೂನು ಬಾಹಿರ. ಕೋರ್ಟ್ ತಡೆಯಾಜ್ಞೆ ನಡುವೆಯೂ ಸರ್ಕಾರ ಪ್ರಾಧಿಕಾರದ ಸಭೆ ನಡೆಸಿರುವುದುದು ಸರಿಯಲ್ಲ ಎಂದು ಪ್ರಮೋದಾದೇವಿ, ಯದುವೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾನೂನಾತ್ಮಕವಾಗಿಯೇ ಸಭೆ ಮಾಡಿದ್ದೇನೆ. ಯಾರದ್ದೋ ಹೇಳಿಕೆ ಆಧರಿಸಿ ಸಭೆ ಮುಂದೂಡಲು ಆಗುವುದಿಲ್ಲ. ಯದುವೀರ್ (Yaduveer Wadiyar) ಹೇಳಿಕೆ ಮುಖ್ಯವೋ? ಕಾನೂನು ಮುಖ್ಯವೋ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ
ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ. ಚಾಮುಂಡೇಶ್ವರಿ ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಹಿಂದೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದರು. ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ರಚನೆಯಾಗಿದೆ. ಹುಲಿಗೆಮ್ಮ ದೇವಸ್ಥಾನ ಮಹದೇಶ್ವರ ದೇವಸ್ಥಾನ, ಸವದತ್ತಿಯ ಯಲ್ಲಮ್ಮ, ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೂ ಪ್ರಾಧಿಕಾರವನ್ನು ಸರ್ಕಾರ ರಚಿಸಿದೆ.
ವಿಶ್ವವಿಖ್ಯಾತ ದಸರಾ (Dassara) ಹಬ್ಬದ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಶುಕ್ರವಾರ, ಶನಿವಾರ, ಭಾನುವಾರಗಳಂದು ಬಹಳ ಭಕ್ತಾದಿಗಳು ಭೇಟಿ ನೀಡುತ್ತಾರೆ. ಶ್ರೀಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅವುಗಳ ಪೈಕಿ ಕೆಲವು ಪೂರ್ಣಗೊಂಡಿದ್ದರೆ ಕೆಲವು ಪೂರ್ಣಗೊಂಡಿಲ್ಲ. ಚಾಮುಂಡಿ ಕ್ಷೇತ್ರ ಮತ್ತು ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರ ರಚನೆಯಾಗಿದೆ. ಹಿಂದೆ ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತು ಮಳಿಗೆಗಳ ನಿರ್ಮಾಣವಾಗಿದೆ. ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಕೂಡಲೇ ಪೂಣಗೊಳಿಸಲು ಸೂಚನೆ ನೀಡಲಾಗಿದೆ. 2018 ರಲ್ಲಿ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದರೂ ಇನ್ನೂ ಪೂರ್ಣವಾಗಿಲ್ಲ. ಅದನ್ನು ಕೂಡಲೇ ಪೂರ್ಣಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ. ಕಸ ವಿಲೇವಾರಿ ಕಾಮಗಾರಿಯ ಸಿವಿಲ್ ಕಾಮಗಾರಿಗಳು ಪೂರ್ಣವಾಗಿದ್ದು, ಈ ತಿಂಗಳೊಳಗೆ ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಸ್ವಚ್ಛತೆಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ. ಚಾಮುಂಡಿ ದೇವಸ್ಥಾನ ಮಾತ್ರವಲ್ಲದೇ ಎಲ್ಲಾ ದೇವಸ್ಥಾನಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಬೇಕು.
ಪ್ರಾಧಿಕಾರದಲ್ಲಿ ಒಟ್ಟು 169.22 ಕೋಟಿ ಲಭ್ಯವಿದ್ದು, ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ.ಗಳು ಲಭ್ಯವಿದೆ. 2023-24 ರಲ್ಲಿ 49.64 ಕೋಟಿ ರೂ.ಗಳ ಆದಾಯ, 28.18 ಕೋಟಿ ರೂ. ನಿವ್ವಳ ಆದಾಯ ಬಂದಿದೆ. ಜುಲೈ ಕೊನೆಯವರೆಗೆ 17.4 ಕೋಟಿ ರೂ. ಆದಾಯ ಬಂದಿದ್ದು, 6.97 ಕೋಟಿ ವೆಚ್ಚವಾಗಿದೆ. ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಿದೆ. ಅಂದರೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿರುವ ದೇವಿಕೆರೆ, ನಂದಿ ಪ್ರತಿಮೆ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ. ಶಾಸಕರು ಹಾಗೂ ಸಚಿವರು ವ್ಯಕ್ತ ಮಾಡಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡುತ್ತದೆ. ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ
ಬೆಟ್ಟಕ್ಕೆ ಬರುವ ಮೆಟ್ಟಿಲುಗಳನ್ನು ಅಭಿವೃದ್ಧಿಪಡಿಲಾಗುವುದು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ, ಧರ್ಮದವರು ದೇವಸ್ಥಾನಕ್ಕೆ ಬರಬಹುದು. ರೋಪ್ ವೇ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಪರಿಸರವಾದಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಹಿಂದೆಯೇ ಸ್ಥಗಿತಗೊಳಿಸಲಾಗಿದೆ.
ದೇವಾಲಯಗಳಲ್ಲಿ ಅಗತ್ಯವಿರುವೆಡೆ ಸಿಸಿಟಿವಿ ಅಳವಡಿಸಬೇಕೆಂದು ತೀರ್ಮಾನಿಸಿ, ಯೂನಿಯನ್ ಬ್ಯಾಂಕ್ ನವರು ಸಿಎಸ್‌ಆರ್ ನಿಧಿಯಿಂದ ಸಿಸಿ ಟಿವಿಗಳ ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಸುತ್ತಮುತ್ತ ದೀಪದ ವ್ಯವಸ್ಥೆಗೊಳಿಸುವ ಜೊತೆಗೆ ಈ ಪ್ರದೇಶದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಒಂದು ಟಾಸ್ಕ್ ಫೋರ್ಸ್ ಅನ್ನು ರಚನೆ ಮಾಡಲಾಗುವುದು.
ಚಾಮುಂಡಿ ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಸಂಪೂರ್ಣ ನಿಷೇದಿಸಲಾಗಿದೆ. ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಪ್ರಸಾದ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದ್ದು, ಈ ಯೋಜನೆಗೆ ಹೆಚ್ಚುವರಿಯಾಗಿ ಬೇಕಾಗುವ 11 ಕೋಟಿ ರೂ.ಗಳನ್ನು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಭರಿಸಲಾಗುವುದು. ದೇವಾಲಯದ ಒಳಗೆ ಛಾಯಾಗ್ರಹಣವನ್ನು ನಿಷೇದಿಸಲಾಗಿದ್ದು, ಮೊಬೈಲ್ ಗಳನ್ನು ಬಂದ್ ಮಾಡಿಕೊಳ್ಳುವ ಆದೇಶ ನೀಡಲಾಗುವುದು.
ಪ್ರಸನ್ನ ಕೃಷ್ಣ ಸ್ವಾಮಿ ದೇವಾಲಯ, ಗಾಯತ್ರಿಯಮ್ಮನವರ ದೇವಾಲಯ, ಭುವನೇಶ್ವರಿ ಅಮ್ಮನವರ ದೇವಾಲಯ , ಕೋಟೆ ಆಂಜನೇಯ ದೇವಾಲಯ, ವರಾಹಸ್ವಾಮಿ ದೇವಾಲಯಗಳ ಈ ಐದು ದೇವಾಲಯಗಳ ಸಮೂಹದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗುವುದು. ಇಲ್ಲಿ ಕರ್ತವ್ಯನಿರ್ವಹಿಸುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಚಾಮುಂಡಿಬೆಟ್ಟ ಕ್ಷೇತ್ರವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವ ಜೊತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಇಲ್ಲಿನ ದಾಸೋಹ ಭವನದ ವ್ಯವಸ್ಥೆಗಳನ್ನು ಸುಧಾರಿಸಿ, ಭಕ್ತಾದಿಗಳಿಗೆ ಶುಚಿ ರುಚಿಯಿರುವಂತಹ ಊಟ ವ್ಯವಸ್ಥೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿಕ್ಷೇತ್ರದ ಪ್ರಾಧಿಕಾರದಲ್ಲಿ 169 ಕೋಟಿ ಖಾಯಂ ಠೇವಣಿ ಇದ್ದು, ಇದರ ಆದಾಯದಲ್ಲಿ ಈ ಎಲ್ಲ ವೆಚ್ಚಗಳನ್ನು ಭರಿಸಬಹುದಾಗಿದೆ. ದೇವಸ್ಥಾನದ ಆಸ್ತಿಯಾಗಿರುವ ಭೂಮಿ ಒತ್ತುವರಿ ಆಗಿರುವ ಸಾಧ್ಯತೆಯಿರುವುದರಿಂದ, ಅವುಗಳ ಸರ್ವೇ ಮಾಡಲು ತಿಳಿಸಲಾಗಿದ್ದು, ಸರ್ವೆ ನಡೆಸಿದ ವರದಿಯನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ.