ಮೀಸಲಾತಿ ಕೊಟ್ಟರೆ ಮಠದಲ್ಲಿ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ: ಬಸವ ಜಯ ಮೃತ್ಯುಂಜಯ ಶ್ರೀ

Public TV
2 Min Read
chitradurga Sri Basava Jaya Mruthyunjaya Swamiji

ಚಿತ್ರದುರ್ಗ: ಪಂಚಮಸಾಲಿಗಳಿಗೆ ಮೀಸಲಾತಿ ಕೊಟ್ಟರೆ ಮಠದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ ಕೊಡುತ್ತೇವೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ಪ್ರತಿಜ್ಞಾ ಪಂಚಾಯತ್ ಅಭಿಯಾನದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಅನ್ಯ ಸಮುದಾಯದವರು ಯಾರೂ ವಿರೋಧ ಮಾಡುತ್ತಿಲ್ಲ. ಆದರೆ ನಮ್ಮಲ್ಲಿ ಇರುವವರೇ ಹೊಟ್ಟೆಕಿಚ್ಚಿನಿಂದ, ಅಸೂಯೆಯಿಂದ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಬೊಮ್ಮಾಯಿ ಬಳಿ ಹೋಗಿ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬೇಡಿ. ಈಗ ಅವರಿಗೆ 2ಎ ಮೀಸಲಾತಿ ಕೊಟ್ಟರೆ ಯತ್ನಾಳ್ ಹೆಸರು ಬರುತ್ತೆ ಎಂದು ಪಿತೂರಿ ನಡೆಸುತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಟಾಂಗ್ ನೀಡಿದರು. ಇದನ್ನೂ ಓದಿ: ತೈಲ ಬಿಕ್ಕಟ್ಟು – ಪೆಟ್ರೋಲ್ ಪಡೆಯಲು ಮುಗಿಬಿದ್ದ ಇಂಗ್ಲೆಂಡ್ ಜನತೆ

ರಾಜಕೀಯ ವಿಚಾರವಾಗಿ ನೀವು ಯಾವ ನಾಯಕರನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ಸಮಾಜ ಹಾಗೂ ಮೀಸಲಾತಿ ವಿಚಾರದಲ್ಲಿ ನಮ್ಮೊಂದಿಗೆ ಪ್ರಾಮಾಣಿಕ ಇರುವವರೇ ನಮ್ಮ ನಾಯಕರು ಎಂದರು.

ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕರೆ ಸಿಎಂ ಬೊಮ್ಮಾಯಿ ಹೆಸರು ಬರುತ್ತೇ ಹೊರೆತು, ಸ್ವಾಮೀಜಿಗೆ ಹಾಗೂ ಯತ್ನಾಳ್ ಗೆ ಅಲ್ಲ. ಮೀಸಲಾತಿ ನೀಡಿದರೆ ಮಠದಲ್ಲಿ ನಿಮ್ಮ ಪೊಟೋ ಹಾಕುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಿದ್ದೆವು. ಈ ಅವಕಾಶವನ್ನು ಯಡಿಯೂರಪ್ಪ ಕಳೆದುಕೊಂಡರು. ಹೀಗಾಗಿ ಈಗ ರಾಜ್ಯದ ಸಿಎಂ ಬೊಮ್ಮಾಯಿ ಅವರಿಗೆ ಆ ಅವಕಾಶ ಸಿಕ್ಕಿದೆ. ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಖಾಯಂ ಆಗಿ ನಮ್ಮ ಮಠದಲ್ಲಿ ಬೊಮ್ಮಾಯಿ ಫೋಟೋ ಹಾಕಿ ಗೌರವ ಕೊಡುತ್ತೇವೆ ಎಂದರು.

ಪಂಚಮಸಾಲಿ ಸಮಾಜಕ್ಕಾಗಿ ಶಾಸಕ ಸ್ಥಾನ ಹೋದರೂ ಪರವಾಗಿಲ್ಲ ಎಂದು ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಸಿ.ಪಾಟೀಲ್ ಹೋರಾಟ ಮಾಡಿದ್ದಾರೆ. ಆದರೆ ಕೆಲವರು ಒಳಗೊಳಗೇ ದ್ರೋಹ ಬಗೆಯುತಿದ್ದಾರೆ ಎಂದು ಅಸಮಧಾನಗೊಂಡ ಸ್ವಾಮೀಜಿ, ಮೀಸಲಾತಿ ವಿರೋಧಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದರು.

ಜಯ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಹೋರಾಟ ಮಾಡಿ ರಾಷ್ಟ್ರಾದ್ಯಂತ ಹೆಸರಾದರೆಂಬ ಅಸೂಯೆಯಿಂದ, ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಿದ್ದಾರೆ. ನಾನು ಇವತ್ತೇ ಕೂಡಲಸಂಗಮ ಪೀಠ ಬಿಟ್ಟು ಹೋಗುತ್ತೇನೆ. ನೀವು ಯಾರಾದರೂ ಸ್ವಾಮೀಜಿಗಳ ಜೊತೆ ನೇತೃತ್ವ ವಹಿಸಿಕೊಳ್ಳಿ. ನಾನು ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ, ನಿಮ್ಮ ಹೋರಾಟಕ್ಕೆ ಬೆಂಬಲ ಕೊಡುತ್ತೇನೆ. ನಾವು ಕಷ್ಟ ಪಟ್ಟು ಹೋರಾಟ ಮಾಡುತ್ತಿದ್ದರೆ, ಕೆಲವರು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಾನು ಶ್ರೀ ಮಠ ಕಟ್ಟಲು ಅಥವಾ ನನ್ನ ವೈಯಕ್ತಿಕ ಬೆಳವಣಿಗೆಗಾಗಿ ಹೋರಾಟ ಮಾಡುತ್ತಿಲ್ಲ. ಇಂತಹ ದೊಡ್ಡ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕಿಡಿ ಕಾರಿದರು.

Share This Article
Leave a Comment

Leave a Reply

Your email address will not be published. Required fields are marked *