ಹೈದರಾಬಾದ್: ಅಗ್ರ ಕ್ರಮಾಂಕದ ಆಟಗಾರರ ಕಳಪೆ ಬ್ಯಾಟಿಂಗ್ ಹಾಗೂ ಕಳಪೆ ಬೌಲಿಂಗ್‌ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (hennai Super Kings) ಎದುರು ಹೀನಾಯ ಸೋಲು ಅನುಭವಿಸಿದೆ. ಸಂಘಟಿತ ಪ್ರದರ್ಶನ ತೋರಿದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತವರಿನಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು 18.1 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸ್ಥಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
Advertisement
Advertisement
ಚೇಸಿಂಗ್ ಆರಂಭಿಸಿದ ಹೈದರಾಬಾದ್ ತಂಡದ ಬ್ಯಾಟರ್‌ಗಳು ಆರಂಭದಲ್ಲೇ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಪವರ್ ಪ್ಲೇ ನಲ್ಲಿ ಅಭಿಷೇಕ್ ಶರ್ಮಾ (Abhishek Sharma), ಏಡನ್ ಮಾರ್ಕ್ರಮ್ ಹಾಗೂ ಟ್ರಾವಿಸ್ ಹೆಡ್ ಅವರ ಸ್ಫೋಟಕ ಪ್ರದರ್ಶನ ತಂಡದ ಗೆಲುವಿಗೆ ನೆರವಾಯಿತು. ಮೊದಲ ವಿಕೆಟ್‌ಗೆ ಕೇವಲ 2.4 ಓವರ್‌ಗಳಲ್ಲೇ 46 ರನ್ ಸಿಡಿಸಿದ್ದ ಸನ್ ರೈಸರ್ಸ್, 6 ಓವರ್‌ಗಳಲ್ಲಿ ಬರೋಬ್ಬರಿ 78 ರನ್ ಬಾರಿಸಿತ್ತು. ಪವರ್ ಪ್ಲೇ ಬಳಿಕ ಸ್ಪಿನ್ ಬೌಲರ್‌ಗಳು ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರೂ ಗೆಲುವು ಕೈತಪ್ಪಿತು.
Advertisement
Advertisement
ಸನ್ ರೈಸರ್ಸ್ ಪರ 308.33 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 37 ರನ್ (4 ಸಿಕ್ಸರ್, 3 ಬೌಂಡರಿ) ಸಿಡಿಸಿದರು. ಏಡನ್ ಮಾರ್ಕ್ರಮ್ 50 ರನ್ (36 ಎಸೆತ, 1 ಸಿಕ್ಸರ್, 4 ಬೌಂಡರಿ), ಟ್ರಾವಿಸ್ ಹೆಡ್ 31 ರನ್, ಶಾಬಾಜ್ ಅಹ್ಮದ್ 18 ರನ್, ಹೆನ್ರಿಕ್ ಕ್ಲಾಸೆನ್ 10 ರನ್, ನಿತಿಶ್ ಕುಮಾರ್ ರೆಡ್ಡಿ 14 ರನ್ ಗಳಿಸಿದರು. ಸಿಎಸ್‌ಕೆ ಪರ ಮೊಯಿನ್ ಅಲಿ 2 ವಿಕೆಟ್ ಕಿತ್ತರೆ, ದೀಪಕ್ ಚಹಾರ್ ಮತ್ತು ಮಹೀಶ್ ತೀಕ್ಷಣ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ರಚಿನ್ ರವೀಂದ್ರ 12 ರನ್‌ಗಳಿಗೆ ಔಟಾಗುತ್ತಿದ್ದಂತೆ, ನಾಯಕ ರುತುರಾಜ್ ಗಾಯಕ್ವಾಡ್ ಸಹ ಶೀಘ್ರವೇ ಪೆವಿಲಿಯನ್‌ಗೆ ಮರಳಿದರು.
ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಆದ್ರೆ ಡೆತ್ ಓವರ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರಸರ್ಶನದಿಂದಾಗಿ ಸಿಎಸ್‌ಕೆ 170 ರನ್‌ಗಳ ಗಡಿ ದಾಟುವಲ್ಲಿಯೂ ವಿಫಲವಾಯಿತು. ಸಿಎಸ್‌ಕೆ ಪರ ಶಿವಂ ದುಬೆ 45 ರನ್, ರಹಾನೆ 35 ರನ್, ಜಡೇಜಾ 31 ರನ್, ರುತುರಾಜ್ (Ruturaj Gaikwad) 26 ರನ್, ರಚಿನ್ 12 ರನ್, ಡೇರಿಲ್ ಮಿಚೆಲ್ 13 ರನ್, ಎಂ.ಎಸ್ ಧೋನಿ (MS Dhoni) 1 ರನ್ ಗಳಿಸಿದರು.
ಹೈದರಾಬಾದ್ ಪರ ಅಭಿಷೇಕ್ ಶರ್ಮಾ, ಭುನೇಶ್ವರ್ ಕುಮಾರ್, ಟಿ ನಟರಾಜನ್, ಪ್ಯಾಟ್ ಕಮ್ಮಿನ್ಸ್ (Pat Cummins), ಶಹಬಾಜ್ ಅಹ್ಮದ್ ಹಾಗೂ ಜಯದೇವ್ ಉನದ್ಕಟ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.