ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊನೆಯ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಕಂಡಿದೆ. ಕೊನೆಯ ಪಂದ್ಯದಲ್ಲಿ ಹೈದರಾಬಾದ್ 110 ರನ್‌ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದ್ರೆ. ಕೋಲ್ಕತ್ತಾ ನೈಟ್‌ರೈಡರ್ಸ್ ಹೀನಾಯ ಸೋಲು ಕಂಡು ನಿರಾಸೆಯಿಂದ ಹೊರನಡೆದಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು. 279 ರನ್ ಗುರಿ ಬೆನ್ನಟ್ಟಿದ ಕೆಕೆಆರ್ 18.4 ಓವರ್‌ಗಳಲ್ಲಿ 168 ರನ್‌ಗಳಿಗೆ ಸರ್ವಪತನ ಕಂಡಿತು.
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಕೆಕೆಆರ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕೆಕೆಆರ್ ಹೀನಾಯ ಸೋಲಿಗೆ ತುತ್ತಾಯಿತು. ಕೋಲ್ಕತ್ತಾ ತಂಡದ ಪರ ಕ್ವಿಂಟನ್ ಡಿ ಕಾಕ್ 13 ಎಸೆತಗಳಿಗೆ 9 ರನ್, ಸುನಿಲ್ ನರೈನ್ 16 ಎಸೆತಗಳಿಗೆ 31 ರನ್ (3 ಬೌಂಡರಿ, 3 ಸಿಕ್ಸ್), ಅಜಿಂಕ್ಯ ರಹಾನೆ 8 ಎಸೆತಗಳಿಗೆ 15 ರನ್ (3 ಬೌಂಡರಿ), ಅಂಗ್‌ಕ್ರಿಶ್ ರಘುವಂಶಿ 18 ಎಸೆತಗಳಿಗೆ 14 ರನ್, ರಿಂಕು ಸಿಂಗ್ 6 ಎಸೆತಗಳಿಗೆ 9 ರನ್, ರಮಣ್‌ದೀಪ್ ಸಿಂಗ್ 5 ಎಸೆತಗಳಿಗೆ 13 ರನ್ (2 ಸಿಕ್ಸ್), ಮನೀಶ್ ಪಾಂಡೆ 23 ಎಸೆತಗಳಿಗೆ 37 ರನ್ (2 ಬೌಂಡರಿ, 3 ಸಿಕ್ಸರ್), ಹರ್ಷಿತ್ ರಾಣಾ 21 ಎಸೆತಗಳಿಗೆ 34 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿದರು. ನರೈನ್ ಹಾಗೂ ಡಿ ಕಾಕ್ ಜೊತೆಯಾಟವಾಡಿ 21 ಎಸೆತಗಳಿಗೆ 37 ರನ್ ಕಲೆಹಾಕಿದರು. ರಹಾನೆ ಹಾಗೂ ಡಿ ಕಾಕ್ 12 ಎಸೆತಗಳಿಗೆ 18 ರನ್ ಗಳಿಸಿಕೊಟ್ಟರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಪರ ಅಭಿಷೇಕ್ ಶರ್ಮಾ 16 ಎಸೆತಗಳಿಗೆ 32 ರನ್ (4 ಬೌಂಡರಿ, 2 ಸಿಕ್ಸ್), ಟ್ರಾವಿಸ್ ಹೆಡ್ 40 ಎಸೆತಗಳಿಗೆ 76 ರನ್ (6 ಬೌಂಡರಿ, 6 ಸಿಕ್ಸ್), ಇಶನ್ ಕಿಶನ್ 20 ಎಸೆತಗಳಿಗೆ 29 ರನ್ (4 ಫೋರ್, 1 ಸಿಕ್ಸ್), ಹೆನ್ರಿಕ್ ಕ್ಲಾಸೆನ್ 39 ಎಸೆತಗಳಿಗೆ 105 ರನ್ (7 ಬೌಂಡರಿ, 9 ಸಿಕ್ಸ್) ಹಾಗೂ ಅನಿಕೇತ್ ವರ್ಮಾ 6 ಎಸೆತಗಳಿಗೆ 12 ರನ್ ಗಳಿಸಿ ಅಜೇಯರಾಗಿ ಉಳಿದು ಆಟ ಮುಗಿಸಿದರು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಜೊತೆಯಾಟವಾಡಿ 41 ಎಸೆತಗಳಿಗೆ 92 ರನ್ ಕಲೆಹಾಕಿದರು. ಕ್ಲಾಸೆನ್ ಹಾಗೂ ಹೆಡ್ ಜೊತೆಯಾಟದಲ್ಲಿ 35 ಎಸೆತಗಳಿಗೆ 85 ರನ್ ಗಳಿಸಿದರು. ಕ್ಲಾಸೆನ್ ಹಾಗೂ ಇಶನ್ ಕಿಶನ್ ಜೊತೆಯಾಟದಲ್ಲಿ 36 ಎಸೆತಗಳಿಗೆ 83 ರನ್ ಗಳಿಸಿದರು.
ಕೋಲ್ಕತ್ತಾ ಪರ ಸುನಿಲ್ ನರೈನ್ 2 ವಿಕೆಟ್ ಕಿತ್ತರೆ, ವೈಭವ್ ಅರೋರಾ 1 ವಿಕೆಟ್ ಪಡೆದರು. ಸನ್‌ರೈಸರ್ಸ್ ಪರ ಜಯದೇವ್ ಉನದ್ಕತ್, ಇಶಾನ್ ಮಲಿಂಗ ಹಾಗೂ ಹರ್ಷ್ ದುಬೆ ತಲಾ 3 ವಿಕೆಟ್ ಕಿತ್ತರು.