ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ (BJP) ಶಾಸಕರಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (S.R Vishwanath) ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಿಂದಲೂ ನಯಾ ಪೈಸೆ ಸಿಗುತ್ತಿಲ್ಲ. ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಿಲ್ಲ. ಕೆರೆ, ಪಾರ್ಕ್ ಯಾವುದಕ್ಕೂ ದುಡ್ಡು ಕೊಟ್ಟಿಲ್ಲ. ಬ್ರ‍್ಯಾಂಡ್ ಬೆಂಗಳೂರು ಹೆಸರು ಮಾತ್ರ ಉಳಿದುಕೊಂಡಿದೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಶಾಸಕರಿಗೆ ಅನುದಾನ ಕೊಟ್ಟಿದ್ದರು. ಈ ಸರ್ಕಾರದಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
- Advertisement -
ಇವತ್ತು (ಜು.27) ಡಿಸಿಎಂ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನುದಾನ ತಾರತಮ್ಯ ಮಾಡಬಾರದು ಎಂದು ಹೇಳುತ್ತೇವೆ. ಜನರು ಕೂಡಾ ನಮಗೆ ಶಾಪ ಹಾಕ್ತಿದ್ದಾರೆ. ಹೂಡಿಕೆದಾರರು ಯಾರು ಬರುತ್ತಿಲ್ಲ. ಕಾಂಗ್ರೆಸ್ ಅವರು ಬೇಕಾದ್ರೆ 100 ಕೋಟಿ ರೂ. ತೆಗೆದುಕೊಳ್ಳಲಿ. ನಮಗೆ 25 ಕೋಟಿ ಆದರೂ ನೀಡಲಿ. ಅನುದಾನದಲ್ಲಿ ತಾರತಮ್ಯ ಮಾಡೋದು ಬೇಡ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
ಬೆಂಗಳೂರು (Bengaluru) 5 ವಿಭಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಬಿಬಿಎಂಪಿ ವಿಭಜನೆಗೆ ನಮ್ಮ ವಿರೋಧ ಇದೆ. 198 ವಾರ್ಡ್ ಇದ್ದಾಗಲೇ ಸರಿಯಾದ ಮೂಲಭೂತ ಸೌಕರ್ಯಗಳು ಕೊಡಲು ಆಗಿಲ್ಲ. ಈಗ ಮತ್ತೆ ವಿಸ್ತರಣೆ ಮಾಡಿದರೆ ಮೂಲಭೂತ ಸೌಕರ್ಯಗಳ ಕೊಡೋದು ಕಷ್ಟವಾಗುತ್ತದೆ. 5 ಮೇಯರ್, ಸಾವಿರ ಜನ ಕಾರ್ಪೊರೇಟರ್‌ಗಳು ಇದ್ದು ಆಡಳಿತ ನಡೆಸೋದು ಕಷ್ಟ ಆಗುತ್ತದೆ. 5 ಮೇಯರ್ ಮಾಡಿದ್ರೆ ಒಬ್ಬರು, ಒಬ್ಬರು ಬೇರೆ ಪಕ್ಷದವವರು ಮೇಯರ್ ಆದ್ರೆ ಹಗ್ಗ ಜಗ್ಗಾಟ ಆಗುತ್ತದೆ. ವಲಯ ಆಯುಕ್ತರಿಗೆ ಅಧಿಕಾರ ಕೊಡಲಿ ಅದಕ್ಕೆ ನಮ್ಮ ವಿರೋಧ ಇಲ್ಲ. ಸರ್ಕಾರ ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ಸರ್ಕಾರ ಸದನ ಸಮಿತಿ ರಚನೆ ಮಾಡುವುದಾಗಿ ಹೇಳಿದೆ. ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದಿದ್ದಾರೆ.