ಬಾಗಲಕೋಟೆ: ನಮ್ಮ ಮನೆ ಮೇಲೆ ಐಟಿ ಅಧಿಕಾರಿಗಳು ತಕ್ಷಣ ದಾಳಿ ಮಾಡಲಿ ಎಂದು ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟೀಲ್ ಸವಾಲು ಹಾಕಿದ್ದಾರೆ.
ಐಟಿ ದಾಳಿ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಏನಿದೆ, ನಮ್ಮ ಮೇಲೆ ರೇಡ್ ಮಾಡಿದರೆ ಅವರೇ ನಮಗೆ ದುಡ್ಡು ಕೊಟ್ಟು ಹೋಗಬೇಕು. ಆ ರೀತಿಯ ಪರಿಸ್ಥಿತಿ ನಮ್ಮದು. ಹೀಗಾಗಿ ನಾಳೆಯೇ ನಮ್ಮ ಮನೆ ಮೇಲೆ ಐಟಿಯವರು ದಾಳಿ ಮಾಡಲಿ ಎಂದರು.
Advertisement
ಯಾವ ರೀತಿಯ ಕಾನೂನು ಬಾಹಿರವಾಗಿ ಹಣ ಬಂದಿದೆ ಎಂದು ಪರಿಶೀಲಿಸಿ ಐಟಿ ಅಧಿಕಾರಿಗಳು ದಾಳಿ ಮಾಡಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಅವರ ನೈತಿಕ ಸ್ಥೈರ್ಯ ಕುಗ್ಗಿಸಬೇಕು ಎಂದು ದಾಳಿ ಮಾಡುತ್ತಾರೆ. ಆದರೆ ಇದು ಸಫಲವಾಗುತ್ತದೆ ಎಂಬುದು ಅವರ ತಿರುಕನ ಕನಸು ಎಂದು ಕಿಡಿಕಾರಿದರು.
Advertisement
Advertisement
ಇದೇ ವೇಳೆ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಹಾಗೂ ಅವರ ಪಿ.ಎ ರಮೇಶ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತವಾದ ದಾಳಿ. ದುರದ್ದೇಶದಿಂದ ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸಬೇಕೆಂದು ದಾಳಿ ಮಾಡಲಾಗಿದೆ. ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಬಿಜೆಪಿ ನಾಯಕರು ಹೇಗಿದ್ದಾರೆಂದು ದೇಶದ 130 ಕೋಟಿ ಜನರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ರಮೇಶ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ಆದರೆ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ಮಾಡಿದ್ದರೆ ಅದು ಸಹ ತಪ್ಪು. ಐಟಿ ಅಧಿಕಾರಿಗಳ ಕಿರುಕುಳ, ಕಾನೂನು ಬಾಹಿರವಾಗಿ ಬೆದರಿಕೆ ಹಾಕಿದ್ದರೆ, ಅದು ಅಪರಾಧವಾಗುತ್ತದೆ. ಅದಕ್ಕೆ ಐಟಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪರ್ಯಟನೆ ಮಾಡಿದ್ದಾರೆ. ಮಂಗಳಲೋಕ, ಚಂದ್ರಲೋಕ ಎರಡೇ ಉಳಿದಿವೆ. ಅನೇಕ ರಾಷ್ಟ್ರಗಳಿಗೆ ಭೇಟಿ ನೀಡುವ ಪ್ರಧಾನಿ ಮೋದಿ, ಚಂದ್ರಯಾನ ವೀಕ್ಷಣೆಗಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಾಜ್ಯದಲ್ಲಿ ನೆರೆ ಬಂದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಪರಿತಪಿಸುತ್ತಿದ್ದರು. ಆದರೂ ಮೋದಿಯವರು ಮಾತ್ರ ನೀವು ಇದ್ದೀರೋ ಸತ್ತಿದ್ದೀರೋ, ನೀರಲ್ಲಿ ಮುಳುಗಿದವರು ಹೊರಗಡೆ ಬಂದಿದ್ದೀರಾ ಎಂದೂ ಕೇಳಿಲ್ಲ. ರಾಜ್ಯ ರಾಜಧಾನಿಗೆ ಬಂದು ರಾಜ್ಯ ನಾಯಕರನ್ನು ಕರೆಸಿ ವಿಚಾರಿಸಿಲ್ಲ. ಕನಿಷ್ಟ ಪಕ್ಷ ಮುಖ್ಯಮಂತ್ರಿಯನ್ನು ಕರೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆರೆಯಿಂದ 38 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ವರದಿ ಕೊಟ್ಟರೆ ಕೇವಲ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. 100 ರೂ.ಗೆ ಮೂರು ರೂಪಾಯಿ ಕೊಟ್ಟಿದ್ದಾರೆ. ಸಿಎಂಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ಇಲ್ಲದಿದ್ದಲ್ಲಿ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಪರಿಹಾರ ವಿಚಾರದಲ್ಲಿ ಕಣ್ಣು ಇಲ್ಲ, ಮೂಗಿಲ್ಲ, ಬಾಯಿ ಇಲ್ಲ, ಕಿವಿ ಇಲ್ಲ, ತ್ವಚೆ ಹೀಗೆ ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ ಇದಾಗಿದೆ. ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ಈ ರೀತಿಯ ಸರ್ಕಾರವನ್ನ ನಾನು ಎಂದೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಶಾಸಕರೇ ನೆರೆ ಪರಿಹಾರದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜನಪರವಾಗಿ ಮಾತನಾಡಿದರು. ಪಕ್ಷ ಅವರಿಗೆ ನೋಟಿಸ್ ಕೊಟ್ಟಿದೆ. ನೆರೆ ಪರಿಹಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರೆ ಅವರನ್ನೂ ದೇಶದ್ರೋಹಿ ಅಂದ ಸರ್ಕಾರ ಇದು. ಈ ಭಂಡ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. 15 ಸ್ಥಾನದಲ್ಲಿ ನಾವು ಕನಿಷ್ಟ ಹತ್ತು ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು 8 ಸ್ಥಾನಗಳನ್ನು ಗೆಲ್ಲಲೇಬೇಕು. ಅವರ ಸಂಖ್ಯೆ 113 ಆಗದಿದ್ರೆ ಏನಾಗುತ್ತೆ ನೋಡಿ, ಇದು ಅಂಕಿಗಳ ಆಟ ಎಂದು ಮಾರ್ಮಿಕವಾಗಿ ನುಡಿದರು.
ಕಲಾಪಕ್ಕೆ ಮಾಧ್ಯಮದವರ ನಿರ್ಬಂಧದ ಕುರಿತು ಮಾತನಾಡಿದ ಅವರು, ಮಾಧ್ಯಮದವರ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವನ್ನೇ ವಿಧಾಸಭೆ ಕಲಾಪದಿಂದ ಹೊರಗಿಟ್ಟಿದ್ದಾರೆ. ವಿಧಾನಸಭೆ ಕಲಾಪದ ದೃಶ್ಯ ಸೆರೆ ಹಿಡಿಯಬಾರದೆಂದು ಮಾಧ್ಯಮದವನ್ನು ಹೊರಹಾಕಿದ್ದಾರೆ. ಸಂವಿಧಾನದ ಮೂಲವೇ ಫ್ರೀಡಂ ಆಫ್ ಸ್ಪೀಚ್, ಅದನ್ನೇ ಹತ್ತಿಕ್ಕುವಂತಹ ಕೆಲಸ ಮಾಡಿದ್ದಾರೆ. ಇದು ನಾಚಿಗೇಡಿನ ಸರ್ಕಾರ ಎಂದು ಕಿಡಿಕಾರಿದರು.