ಬಾಗಲಕೋಟೆ: ಅನರ್ಹ ಶಾಸಕರನ್ನು ಮರಳಿ ಕಾಂಗ್ರೆಸ್ಸಿಗೆ ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನ ವೈಯಕ್ತಿಕ, ಪಕ್ಷದ ನಾಯಕರ ಅಭಿಪ್ರಾಯವೂ ಇದೇ ಆಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತು ಪ್ರಳಯ ಆದರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ಅಭಿಪ್ರಾಯವಾಗಿದೆ. ಜೊತೆಗೆ ನನ್ನ ವೈಯಕ್ತಿಕ ಅಭಿಪ್ರಾಯವೂ ಸಹ ಅಂತಹವರನ್ನು ಪಕ್ಷಕ್ಕೆ ಕರೆ ತರುವುದು ಸೂಕ್ತವಲ್ಲ. ಇದು ನನ್ನ ಖಡಾಖಂಡಿತ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ರಾಜ್ಯದ ಉಪ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಹೆಚ್ಚು ಸ್ಥಾನ ಗೆಲ್ಲಲು ಸಾಮೂಹಿಕ ನಾಯಕತ್ವ ಅಗತ್ಯ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ಇದನ್ನೇ ಹೇಳಿದ್ದೇವೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಸಂಬಂಧವೂ ಚೆನ್ನಾಗಿದೆ. ಪಕ್ಷ ಶಕ್ತಿಶಾಲಿ ಆಗಲು ಐಕ್ಯತೆಯಿಂದ ಒಂದು ಮನಸ್ಸಿನಿಂದ ಕೆಲಸ ಮಾಡಬೇಕು. ಎತ್ತು ಏರಿಗೆ, ಕೋಣ ಕೆರೆಗೆ ಎಳೆದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ವಿಚಾರ ಭಿನ್ನ ಇರಬಹುದು. ಆದರೆ ಹೈಕಮಾಂಡ್ ತೀರ್ಮಾನದಂತೆ ಎಲ್ಲರೂ ನಡೆಯುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆ. ಪಕ್ಷಕ್ಕೆ ಮಾರಕವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸ್ಪೀಕರ್ ನೀಡಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದೆ ಅಷ್ಟೇ. ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡಿದೆ. ಸಾಯುವವರೆಗೂ ಜೈಲಿನಲ್ಲಿ ಇರುವ ಬದಲಿಗೆ ಅವಧಿ ಕಡಿಮೆ ಮಾಡಿದೆ. ಆದರೆ ಒಂದು ದಿನ ಜೈಲಿನಲ್ಲಿ ಇದ್ದರೂ ಅದು ಶಿಕ್ಷೆಯೇ, ಅನರ್ಹ ಶಾಸಕರಾಗಿಯೇ ಅವರು ಜನತಾ ನ್ಯಾಯಾಲಯದ ಮುಂದೆ ಹೋಗಬೇಕು ಎಂದರು.
Advertisement
ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್‍ಗೆ ಎಷ್ಟು ದ್ರೋಹ ಮಾಡಿದ್ದಾರೋ ಅದಕ್ಕಿಂತ ಹೆಚ್ಚು ಬಿಜೆಪಿಗೆ ದ್ರೋಹ ಮಾಡುತ್ತಾರೆ. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ. ಅಲ್ಲಿ ಸಲ್ಲದವರು ಕಾಂಗ್ರೆಸಿನಲ್ಲಿ ಸಲ್ಲಬಹುದು. ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸಿಗೆ ಬಂದರೆ ಸ್ವಾಗತ. ಅವರ ಸಿಟ್ಟು ಇಮ್ಮಡಿ ಆಗಿದೆ. ಅದರಿಂದಲೆ ಅನರ್ಹ ಶಾಸಕರು ಸೋಲುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.