ನವದೆಹಲಿ: 2013ರಲ್ಲಿ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ಶಿಸ್ತು ಸಮಿತಿ ವಿಧಿಸಿದ್ದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ನಿಷೇಧದ ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿದೆ.
ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಕೆಎಂ ಜೋಸೆಫ್ ದ್ವಿಸದಸ್ಯ ಪೀಠ ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಿ ಮೂರು ತಿಂಗಳ ಒಳಗಾಗಿ ಮರುವಿಚಾರಣೆ ನಡೆಸಿ ಉತ್ತರಿಸುವಂತೆ ಸೂಚಿಸಿದೆ.
Advertisement
Advertisement
ಶ್ರೀಶಾಂತ್ ಪರ ವಕೀಲರಾದ ಸಲ್ಮಾನ್ ಖುರ್ಷಿದ್ ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ಖಚಿತವಾದ ಆಧಾರಗಳಿಲ್ಲದೇ ಅಜೀವ ನಿಷೇಧ ಶಿಕ್ಷೆ ಬಹಳ ಕಠಿಣ ನಿರ್ಣಯ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ನಿರ್ಧಾರ ಶ್ರೀಶಾಂತ್ ವಿರುದ್ಧದ ಕ್ರಿಮಿನಲ್ ಪ್ರಕರಣ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
2013ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಶ್ರೀಶಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ವೇಳೆ ಓವರಿನಲ್ಲಿ 14 ರನ್ ನೀಡಲು ಶ್ರೀಶಾಂತ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಆ ಓವರಿನಲ್ಲಿ 13 ರನ್ ಮಾತ್ರ ಬಂದಿದೆ. ಶ್ರೀಶಾಂತ್ ಯಾವುದೇ ಫಿಕ್ಸಿಂಗ್ ಮಾಡಿಕೊಂಡಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಕೇವಲ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿತ್ತು ಎಂಬುದನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೇ ಬಿಸಿಸಿಐ ನಿಷೇಧವನ್ನು ತೆರವುಗೊಳಿಸಿದರೆ ಮತ್ತೆ ಕ್ರಿಕೆಟ್ ಆಡಲು ಶ್ರೀಶಾಂತ್ ಸಿದ್ಧರಿದ್ದಾರೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
Advertisement
2018 ರಲ್ಲಿ ಕೇರಳ ಹೈಕೋರ್ಟ್ ಏಕ ಸದಸ್ಯ ಪೀಠ ಬಿಸಿಸಿಐ ಆದೇಶವನ್ನು ರದ್ದುಗೊಳಿಸಿತ್ತು. ಬಿಸಿಸಿಐ ಈ ತೀರ್ಪಿನ ಬಗ್ಗೆ ಮರುಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಿಷೇಧವನ್ನು ತೆರವುಗೊಳಿಸಲು ತಡೆ ನೀಡಿತ್ತು. ಪರಿಣಾಮ ಶ್ರೀಶಾಂತ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಶ್ರೀಶಾಂತ್ ಮಾತ್ರವಲ್ಲದೇ ಮತ್ತಿಬ್ಬರು ಆಟಗಾರರ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv