ಕೋಲಾರ: ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಯನ್ನು ಖಂಡಿಸಿ ಬೆಳ್ಳಂಬೆಳಗ್ಗೆ ಕೋಲಾರದ ಕ್ರೀಡಾಪಟುಗಳೆಲ್ಲ ರಸ್ತೆ ಮಧ್ಯೆ ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ರಸ್ತೆಯಲ್ಲೇ ವಾಲಿಬಾಲ್ ಆಟವಾಡಿ, ಜಾಗಿಂಗ್ ಹಾಗೂ ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕ್ರೀಡಾಂಗಣದಲ್ಲಿ ಸೂಕ್ತವಾದ ಸಿಂಥೆಟಿಕ್ ಟ್ರ್ಯಾಕ್ ಮಾಡಿಲ್ಲ. ಕ್ರೀಡಾಂಗಣದಲ್ಲಿ ಹಾಕಿರೋ ಡಾಂಬರಿನಿಂದಾಗಿ ಪ್ರತಿ ನಿತ್ಯ ಕ್ರೀಡಾಪಟುಗಳಿಗೆ ಕಿರಿಕಿರಿ ಉಂಟಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಆರೋಪಿಸಲಾಗಿದೆ.
ಜಿಲ್ಲೆಯಿಂದ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇದ್ದರೂ ಸ್ಥಳೀಯವಾಗಿ ಕ್ರೀಡಾಪಟುಗಳಿಗೆ ಸರಿಯಾದ ಬೆಂಬಲ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕ್ರೀಡಾಂಗಣದ ಅಭಿವೃದ್ದಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಕೂಡಲೇ ಕ್ರೀಡಾಂಗಣ ಸರಿಪಡಿಸದೆ ಇದ್ದಲ್ಲಿ ಪ್ರತಿನಿತ್ಯ ಹೀಗೆ ರಸ್ತೆ ತಡೆದು ರಸ್ತೆಯನ್ನೇ ಕ್ರೀಡಾಂಗಣ ಮಾಡಿಕೊಳ್ಳಬೇಕಾಗುತ್ತದೆ ಎಂದು ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಳ್ಳಂಬೆಳಗ್ಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡ ಬೇಕಾಯಿತು. ಇದೇ ವೇಳೆ ಹಿರಿಯರು, ಮಕ್ಕಳು ಸೇರಿದಂತೆ ನೂರಾರು ಜನರು ಪ್ರತಿಭಟನೆಗೆ ಬೆಂಬಲ ನೀಡಿ ಕ್ರಿಡಾಪಟುಗಳಿಗೆ ಸಾಥ್ ನೀಡಿದರು.