ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಪೃಥ್ವಿ ಶಾ ಅವರ ಪ್ರಕರಣದ ಬೆನ್ನಲ್ಲೇ ಕೇಂದ್ರ ಸರ್ಕಾರ ಬಿಸಿಸಿಐ ಬಿಸಿ ಮುಟ್ಟಿಸಿದೆ.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರಿಗೆ ಕೇಂದ್ರದ ಕ್ರೀಡಾ ಸಚಿವಾಲಯ ಪತ್ರ ಬರೆದಿದೆ. ಈ ಪತ್ರದಲ್ಲಿ ಬಿಸಿಸಿಐಗೆ ಆಟಗಾರರ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಲು ಸರ್ಕಾರದ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆ ಅನುಮತಿ ಇಲ್ಲದ ಕಾರಣ ಬಿಸಿಸಿಐ ಪರೀಕ್ಷೆ ನಡೆಸುವಂತಿಲ್ಲ ಎಂದು ಹೇಳಿದೆ.
ಕ್ರೀಡೆಯಲ್ಲಿ ಪರೀಕ್ಷೆ ನಡೆಸಲು ಕಡ್ಡಾಯವಾಗಿ ಸ್ವಯತ್ತ ಸಂಸ್ಥೆಯಾದ ನಾಡಾ ದೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿಲ್ಲ. ಹಲವು ವರ್ಷಗಳಿಂದ ಬಿಸಿಸಿಐ ಮೇಲೆ ಸರ್ಕಾರ ಒತ್ತಡ ಹಾಕುತ್ತಿದ್ದರು ಬಿಸಿಸಿಐ ಇದಕ್ಕೆ ಮುಂದಾಗಿರಲಿಲ್ಲ. ದೇಶದ ಎಲ್ಲಾ ಕ್ರೀಡಾಪಟುಗಳ ಉದ್ದೀಪನ ಮದ್ದು ಪರೀಕ್ಷೆಯನ್ನು ನಾಡಾವೇ ನಡೆಸುತ್ತದೆ. ಆದರೆ ಈ ಸಾಲಿಗೆ ಬದ್ಧವಾಗಲು ಬಿಸಿಸಿಐ ಹಿಂದೇಟು ಹಾಕುತ್ತಿದೆ.
ಇದೇ ಸಂದರ್ಭದಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಬಿಸಿಸಿಐ ಅತಿಯಾದ ಪಾಲ್ಗೊಳ್ಳುವಿಕೆನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಶ್ನಿಸಿದೆ. ನಾಡಾ ಅಂಗೀರಿಸಿದ ನಾಡಾ ನಿಯಮಗಳ ಪ್ರಕಾರ ಬೇರೆ ಸಂಸ್ಥೆಗಳಿಂದ ಉದ್ದೀಪನ ಮದ್ದು ಪರೀಕ್ಷೆ ನಡೆಸುವಂತಿಲ್ಲ. ಆದರೆ ಬಿಸಿಸಿಐ ಕೆಲ ನಿಯಮಗಳನ್ನು ತೋರಿಸಿ ಸ್ವತಃ ವಿಚಾರಣೆ ನೇಮಿಸುತ್ತಿದೆ. ಇದು ನೈಸರ್ಗಿಕ ನ್ಯಾಯ ತತ್ವಗಳಿಗೆ ಅನುಗುಣವಾಗಿಲ್ಲ ಎಂದು ಕೇಂದ್ರ ತನ್ನ ಪತ್ರದಲ್ಲಿ ಖಾರವಾಗಿ ತಿಳಿಸಿದೆ.
ಇತ್ತ ಕೆಲ ಸಮಯದ ಹಿಂದೆಯಷ್ಟೇ ಬಿಸಿಸಿಐ ಉದ್ದೀಪನ ಮದ್ದು ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ (ನಾಡಾ) ಸಂಸ್ಥೆಯ ಕೆಳಗೆ ಕಾರ್ಯನಿರ್ವಹಿಸಲು ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿತ್ತು. ಇದರ ನಡುವೆಯೂ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಮೇಲಿನ ನಿಷೇಧ ವಿಧಿಸಿರುವ ಪ್ರಕರಣದ ಮೇಲೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಬಿಸಿಸಿಐ ಸದ್ಯ ಖಾಸಗಿ ಸಂಸ್ಥೆಯ ಮೂಲಕ ಉದ್ದೀಪನ ಮದ್ದು ಪರೀಕ್ಷೆಗಳನ್ನು ನಡೆಸುತ್ತಿದೆ. ಆ ಬಳಿಕ ಆಟಗಾರರ ವರದಿಯನ್ನು ಐಸಿಸಿ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆಗೆ ಕಳುಹಿಸುತ್ತದೆ. ಸದ್ಯ ಭಾರತದ ಸಂಸ್ಥೆಯಾಗಿರುವ ನಾಡಾ ಅಡಿಯೇ ಉದ್ದೀಪನ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗೆ ಸಹಿ ಹಾಕಿದೆ. ಅಕ್ಟೋಬರ್ ನಿಂದ ಕ್ರಿಕೆಟ್ ಆಟಗಾರರ ಉದ್ದೀಪನ ಪರೀಕ್ಷೆಗಳನ್ನು ನಾಡಾ ಸಂಸ್ಥೆ ನಿರ್ವಹಿಸಲಿದೆ ಎಂಬ ಮಾಹಿತಿ ಇದೆ. ಪೃಥ್ವಿ ಶಾ ರೊಂದಿಗೆ ಮತ್ತಿಬ್ಬರು ಆಟಗಾರರು ಕೂಡ ಮಂಗಳವಾರ ಆಟಗಾರರು ನಿಷೇಧಕ್ಕೆ ಒಳಗಾಗಿದ್ದಾರೆ.
ನಿಷೇಧ ಯಾಕೆ?
ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಗಾಯಗೊಂಡಿದ್ದ ಪೃಥ್ವಿ ಶಾ ಹಿಂದಿರುಗಿದ ಬಳಿಕ ಬಿಸಿಸಿಐ ಕ್ಯಾಂಪ್ ನಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು. ಆ ಬಳಿಕ ಫೆಬ್ರವರಿ ಅಂತ್ಯದಲ್ಲಿ ಸೈಯ್ಯದ್ ಮುಷ್ತಾಕ್ ಟಿ20 ಟ್ರೋಫಿಯಲ್ಲಿ ಭಾಗವಹಿಸಲು ಪೃಥ್ವಿ ಶಾ ಇಂದೋರಿಗೆ ತೆರಳಿದಾಗ ಕೆಮ್ಮು ಕಾಣಿಸಿಕೊಂಡಿತ್ತು. ಈ ವೇಳೆ ತಂದೆಯ ಸಲಹೆಯಂತೆ ತಾನು ಉಳಿದುಕೊಂಡಿದ್ದ ಹೋಟೆಲ್ ಸಮೀಪದ ಮೆಡಿಕಲ್ ಸ್ಟೋರಿಗೆ ತೆರಳಿ ಕೆಮ್ಮಿಗೆ ಸಿರಾಪ್ ತೆಗೆದುಕೊಂಡಿದ್ದರು. ಫೆ.21ರಂದು ಸಿಕ್ಕಿಂ ವಿರುದ್ಧ ಪೃಥ್ವಿ ಮೊದಲ ಪಂದ್ಯವನ್ನಾಡಿದ್ದರು. ಮರು ದಿನ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಕಳೆದ 7 ದಿನಗಳಲ್ಲಿ ನಾನು ಔಷಧಿ ಸೇವಿಸಿದ್ದ ವಿಚಾರವನ್ನು ತಿಳಿಸಿದ್ದರು.
ಪರೀಕ್ಷೆಯಲ್ಲಿ ಟೆರ್ಬುಟಾಲಿನ್ ಸೇವಿಸಿದ ಅಂಶ ಪತ್ತೆಯಾಗಿತ್ತು. ಟೆರ್ಬುಟಾಲಿನ್ ಅನ್ನು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) ನಿಷೇಧಿತ ಮದ್ದುಗಳ ಪಟ್ಟಿಗೆ ಸೇರಿಸಿದೆ. ಈ ವಿಚಾರ ಪೃಥ್ವಿ ಶಾ ಅವರಿಗೆ ತಿಳಿಯದ ಕಾರಣ ಎಲ್ಲ ಔಷಧಿಯಂತೆ ಸಿರಾಪ್ ತೆಗೆದುಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪೃಥ್ವಿ ಶಾ ಈ ಬಗ್ಗೆ ಸ್ಪಷ್ಟನೆ ನೀಡಿ ತನ್ನ ಅರಿವಿಲ್ಲದೆ ಔಷಧಿಯನ್ನು ಸೇವನೆ ಮಾಡಿದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಒಪ್ಪಿಕೊಂಡಿದ್ದರು.
ಉದೇಶಪೂರ್ವಕವಾಗಿ ಸೇವಿಸದ ಕಾರಣ ಕೇವಲ 8 ತಿಂಗಳ ನಿಷೇಧ ಹೇರಲಾಗಿದೆ. ಒಂದೊಮ್ಮೆ ಉದ್ದೇಶಪೂರ್ವಕವಾಗಿ ಸೇವಿಸಿದ್ದರೆ ಪೃಥ್ವಿ ಶಾ 2ರಿಂದ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇತ್ತು.
— Prithvi Shaw (@PrithviShaw) July 30, 2019