Connect with us

100 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ: ಪ್ರಹ್ಲಾದ್ ಜೋಶಿ ಭರವಸೆ

100 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ: ಪ್ರಹ್ಲಾದ್ ಜೋಶಿ ಭರವಸೆ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಹುಬ್ಬಳ್ಳಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ಮಹಾನಗರ ಪಾಲಿಕೆಯ ಈಜುಗೊಳ, ಸ್ಮಾರ್ಟ್ ಹೆಲ್ತ್, ಸ್ಮಾರ್ಟ್ ಸ್ಕೂಲ್‍ಗಳ ಉದ್ಘಾಟನೆ ಹಾಗೂ ನೂತನ ಯೋಜನೆಗಳಾದ ಬೆಂಗೇರಿ ಮತ್ತು ಉಣಕಲ್ ಮಾರುಕಟ್ಟೆ ನಿರ್ಮಾಣ, ಬಹುವಾಹನ ನಿಲುಗಡೆ, ಸ್ಮಾರ್ಟ್ ರಸ್ತೆ ಕಾಮಗಾರಿ ಪ್ಯಾಕೇಜ್ 5&6, ಪುಟಾಣಿ ರೈಲು ಯೋಜನೆಗಳಿಗೆ ಪ್ರಹ್ಲಾದ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ದೇಶದ ಜನರ ಆರೋಗ್ಯ ಗುಣಮಟ್ಟದ ಮೇಲೆ ದೇಶದ ಪ್ರಗತಿ ಅಳೆಯಲಾಗುತ್ತದೆ. ಉತ್ತಮ ಆರೋಗ್ಯ ಹೊಂದಿರುವ ಪ್ರಜೆಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡಬಲ್ಲರು. ಸ್ಮಾರ್ಟ್ ಸಿಟಿ ಯೋಜನೆ ಅಡಿ ಹಳೆಯ ಈಜುಗೊಳವನ್ನು ನವೀಕರಿಸಲಾಗಿದೆ. ಚಿಟುಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ ಹೆಲ್ತ್ ಆರಂಭಿಸಲಾಗಿದ್ದು, ಜನರ ಆರೋಗ್ಯ ತಪಾಸಣೆ ಹಾಗೂ ವರದಿಗಳನ್ನು ಕಂಪ್ಯೂಟರ್ ಆಧಾರಿತ ಕೃತಕ ಬುದ್ಧಿಮತ್ತೆಯಿಂದ ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.

ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿ ಬಳಸಿ ಧಾರವಾಡದ ಡಿ.ಸಿ.ಕಾಂಪೌಡ್ ಬಳಿ 15 ಕೋಟಿ ರೂ. ವೆಚ್ಚದಲ್ಲಿ ಈಜುಗೋಳ ನಿರ್ಮಿಸಲಾಗುತ್ತಿದೆ. ಇದನ್ನು ಮೇಲ್ದರ್ಜೆಗೇರಿಸಿ ಕ್ರೀಡಾ ಸಮುಚ್ಚಯವನ್ನಾಗಿಸಲಾಗುವುದು. ಇದಕ್ಕೆ ತಗಲುವ ಹೆಚ್ಚುವರಿ 15 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೊರೇಷನ್ (ಔಓಉಅ) ನೀಡಲು ಸಿದ್ಧವಿದೆ. ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿ ಅಡಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು.
ಕ್ರೀಡೆಗೆ ಹೆಚ್ಚಿನ ಓತ್ತು ನೀಡುವುದರೊಂದಿಗೆ ಮುಂಬರುವ ಓಲಿಂಪಿಕ್‍ನಲ್ಲಿ ಭಾರತದ ಕ್ರೀಡಾಪಟುಗಳು ಎರಡಂಕಿಯನ್ನು ದಾಟಿ ಪದಗಳನ್ನು ಜಯಿಸುವಂತೆ ಪ್ರೋತ್ಸಾಹಿಸಲಾಗುವುದು ಎಂದರು.

ಕೇಂದ್ರ ರಸ್ತೆ ನಿಧಿ ಅಡಿ ಹುಬ್ಬಳ್ಳಿ ಧಾರವಾಡ ಬಹುತೇಕ ರಸ್ತೆಗಳನ್ನು ದುರಸ್ತಿಗೊಳಿಸಲಾಗಿದೆ. ಪಾಲಿಕೆಯು ಕಸ ಹಾಗೂ ಧೂಳು ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಬೇಕು. ಬೀದಿ ದೀಪ ಹಾಗೂ ಕುಡಿಯುವ ನೀರಿನ ಸರಬರಾಜಿಗೂ ಒತ್ತು ನೀಡಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮೊದಲ ಹಂತದ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಆದಷ್ಟು ಬೇಗ ಬಿಆರ್‍ಟಿಎಸ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಸ್ಥಗಿತಗೊಂಡಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗುವುದು. ಫೆಬ್ರವರಿ 14ರಂದು ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವಂತೆ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಉದ್ಯಮಿಗಳನ್ನು ಆಹ್ವಾನಿಸಲು ಮುಂಬೈಯಲ್ಲಿ ರೋಡ್ ಶೋ ಮಾಡಲಾಗಿದೆ. ಜ.29 ರಂದು ಹೈದರಾಬಾದ್‍ನಲ್ಲೂ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಿ.ಡಬ್ಲ್ಯೂ.ಶಕೀಲ್ ಅಹಮದ್ ಮಾತನಾಡಿ, ಸ್ಮಾರ್ಟ್ ಸಿಟಿಯ 55 ಯೋಜನೆಗಳ ಪೈಕಿ 9 ಯೋಜನೆಗಳು ಪೂರ್ಣಗೊಂಡಿವೆ. 3.3 ಕೋಟಿ ರೂ. ವೆಚ್ಚದಲ್ಲಿ ಈಜುಗೊಳ, 3.6 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಹೆಲ್ತ್, 1.17ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸ್ಕೂಲ್ ನಿರ್ಮಿಸಲಾಗಿದೆ. 6.08 ಕೋಟಿ ರೂ. ವೆಚ್ಚದಲ್ಲಿ ಬೆಂಗೇರಿ ಹಾಗೂ 2.09 ಕೋಟಿ ರೂ. ವೆಚ್ಚದಲ್ಲಿ ಉಣಕಲ್ ಮಾರುಕಟ್ಟೆಗಳನ್ನು ಬಹುಉಪಯೋಗಿ ಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಂದಿರಾ ಗಾಜಿನ ಮನೆ ಆವರಣದಲ್ಲಿ 4.59 ಕೋಟಿ ರೂ. ವೆಚ್ಚದಲ್ಲಿ ಬಹುವಾಹನ ನಿಲುಗಡೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ. ಇಂದಿರಾಗಾಜಿನ ಮನೆಯಲ್ಲಿ ಪುಟಾಣಿ ರೈಲು ಹಾಗೂ ಸ್ಮಾರ್ಟ್ ಪ್ಯಾಕೇಜ್ 5&6 ಅಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಶಾಸಕ ಅರವಿಂದ ಚಂದ್ರಕಾಂತ್ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಇದ್ದರು.

Advertisement
Advertisement