ಲೈಂಗಿಕ ಕಿರುಕುಳ ಆರೋಪ – ಸಿಐಎಸ್‌ಎಫ್‌ ಅಧಿಕಾರಿಗೆ ಸ್ಪೈಸ್‌ಜೆಟ್‌ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ

Public TV
1 Min Read
SpiceJet staff

ಜೈಪುರ: ಸ್ಪೈಸ್‌ಜೆಟ್‌ ವಿಮಾನದ ಮಹಿಳಾ ಸಿಬ್ಬಂದಿಯೊಬ್ಬರು ಸಿಐಎಸ್‌ಎಫ್‌ ಯೋಧನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಜೈಪುರ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕಪಾಳಮೋಕ್ಷ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರತಾ ತಪಾಸಣೆ ವೇಳೆ ಯೋಧ ತನಗೆ ಲೈಂಗಿಕ ಕಿರುಕುಳ ನೀಡಿದನೆಂದು ಮಹಿಳೆ ಆರೋಪಿಸಿದ್ದಾರೆ.

SpiceJet

ಅನುರಾಧಾ ರಾಣಿ ಅವರು ಬೆಳಗ್ಗೆ 4 ಗಂಟೆ ಸುಮಾರಿಗೆ ಇತರ ಸಿಬ್ಬಂದಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾಗ ಅನುಮತಿಯಿಲ್ಲದ ಕಾರಣ ಆಕೆಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗಿರಿರಾಜ್ ಪ್ರಸಾದ್ ತಡೆದರು. ನಂತರ ಅನುರಾಧಾ ಅವರನ್ನು ಹತ್ತಿರದ ಪ್ರವೇಶದ್ವಾರದಲ್ಲಿ ಏರ್‌ಲೈನ್ ಸಿಬ್ಬಂದಿಗೆ ತಪಾಸಣೆಗೆ ಒಳಪಡಿಸುವಂತೆ ಕೇಳಲಾಯಿತು. ಆದರೆ ಆ ಸಮಯದಲ್ಲಿ ಯಾವುದೇ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಇರಲಿಲ್ಲ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ನಂತರ ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಲು ಮಹಿಳಾ ಸಹೋದ್ಯೋಗಿಯನ್ನು ಕರೆದರು. ಆದರೆ ಅದಾಗಲೇ ವಾಗ್ವಾದ ಉಲ್ಬಣಗೊಂಡಿತ್ತು. ಈ ವೇಳೆ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜೈಪುರ ವಿಮಾನ ನಿಲ್ದಾಣದ ಅಧಿಕಾರಿ ರಾಮ್ ಲಾಲ್ ಹೇಳಿದ್ದಾರೆ.

ಮಹಿಳಾ ಸಿಬ್ಬಂದಿ ವಿಮಾನ ನಿಲ್ದಾಣದ ಪ್ರವೇಶ ಪಾಸ್‌ ಹೊಂದಿದ್ದರು. ಆದರೆ ಆಕೆಯನ್ನು ಸಿಐಎಸ್‌ಎಫ್‌ ಸಿಬ್ಬಂದಿ ಅನುಚಿತ ಮತ್ತು ಸ್ವೀಕಾರಾರ್ಹವಲ್ಲದ ರೀತಿ ನಡೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Share This Article