ಚೆನ್ನೈ: ಗಗನಸಖಿಯರನ್ನು ವಿವಸ್ತ್ರಗೊಳಿಸಿ ಪರಿಶೀಲನೆ ನಡೆಸಿರುವ ಘಟನೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಘಟನೆ ಶನಿವಾರ ಬೆಳಗ್ಗೆ ನಡೆದಿದ್ದು, ಸ್ಪೈಸ್ ಜೆಟ್ ಏರ್ ಲೈನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಗಗನಸಖಿಯರು ಸಂಸ್ಥೆಯ ಭದ್ರತಾ ಸಿಬ್ಬಂದಿಯ ಮೇಲೆ ಈ ಆರೋಪ ಮಾಡಿದ್ದಾರೆ. ತಪಾಸಣೆಯ ವೇಳೆ ಗಗನಸಖಿಯರ ಸ್ಯಾನಿಟರಿ ಪ್ಯಾಡ್ ಅನ್ನು ಬಿಚ್ಚಿ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ಕುರಿತು ಗಗನಸಖಿಯರು ಸಂಸ್ಥೆಯ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಪಾಸಣೆಯ ವೇಳೆ ಮಹಿಳಾ ಸಿಬ್ಬಂದಿಯೊಬ್ಬರು ಉದ್ದೇಶ ಪೂರ್ವಕವಾಗಿ ತಮ್ಮ ಅಂಗಾಂಗಳನ್ನು ಮುಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಗಗನಸಖಿಯರ ಮೇಲೆ ವಿಮಾನದಲ್ಲಿ ಕಳ್ಳಸಾಗಾಣೆ ಹಾಗೂ ವಿಮಾನದಲ್ಲಿ ಮಾರಾಟ ಮಾಡಿದ ಹಣ ಕದ್ದ ವಿಚಾರವಾಗಿ ತಪಾಸಣೆ ಮಾಡಲಾಗಿದ್ದು, ಕಳೆದ ಮೂರು ದಿನಗಳಿಂದ ತಮ್ಮನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿದ್ದಾರೆ ಎಂದು ಗಗನಸಖಿಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಆರೋಪ ನಿರಾಕರಿಸಿದ ಸ್ಪೈಸ್ ಜೆಟ್: ಗಗನಸಖಿಯರ ಆರೋಪವನ್ನು ನಿರಾಕರಿಸಿರುವ ಸ್ಪೈಸ್ ಜೆಟ್ ಸಂಸ್ಥೆ, ಪ್ರಯಾಣಿಕರಿಗೆ ಯಾವ ರೀತಿಯ ತಪಾಸಣೆ ಮಾಡುವ ಸುರಕ್ಷತೆಯ ರೀತಿಯಲ್ಲೇ ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿದೆ. ನಮಗೆ ಪ್ರಯಾಣಿಕರ ಹಾಗೂ ಸಿಬ್ಬಂದಿಯ ರಕ್ಷಣೆ ಮುಖ್ಯ ಎಂದು ಪ್ರತಿಕ್ರಿಯಿಸಿದೆ.