ಪುಣೆ: ಸ್ಪೆಲ್ಲಿಂಗ್ ತಪ್ಪು ಬರೆದ ಕಾರಣಕ್ಕೆ ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ಒಂದನೆ ತರಗತಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ನಗರದ ಸ್ವಾಮಿ ಸಮರ್ಥ್ ಇಂಗ್ಲಿಷ್ ಮೀಡಿಯಂ ಸ್ಕೂಲ್‍ನ ಒಂದನೇ ತರಗತಿಯ ವಿದ್ಯಾರ್ಥಿ ತನ್ನ ಪುಸ್ತಕದಲ್ಲಿ ತಪ್ಪಾಗಿ ಸ್ಪೆಲ್ಲಿಂಗ್ ಬರೆದಿದ್ದ. ಸ್ಪೆಲ್ಲಿಂಗ್ ತಪ್ಪಾಗಿದ್ದನ್ನು ನೋಡಿದ ಶಿಕ್ಷಕರು ಆತನ ತಲೆಗೆ ಡಸ್ಟರ್ ನಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Advertisement
ಗುರುವಾರ ಈ ಘಟನೆ ನಡೆದಿದ್ದು, ಬಾಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ. ಈಗ ತಂದೆ ದೂರು ಕೊಟ್ಟ ಹಿನ್ನೆಲೆಯಲ್ಲಿ ವೈದ್ಯರು ನೀಡಿದ ವೈದ್ಯಕೀಯ ವರದಿಯ ಆಧಾರದಲ್ಲಿ ಪೊಲೀಸರು ಶಿಕ್ಷಕರ ವಿರುದ್ಧ ಐಪಿಸಿ ಸೆಕ್ಷನ್ 324(ಅಪಾಯಕಾರಿ ಸಾಧನಗಳಿಂದ ಗಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement
ಈ ಬಗ್ಗೆ ಶಾಲೆಯ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ದೂರು ದಾಖಲಾದ ಬಳಿಕ ನಮ್ಮ ಗಮನಕ್ಕೆ ಪ್ರಕರಣ ಬಂದಿದೆ. ಶಿಕ್ಷಕರ ಜೊತೆ ಈ ವಿಚಾರದ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಬಾಲಕನ ತಂದೆ ಪ್ರತಿಕ್ರಿಯಿಸಿ, 6 ವರ್ಷದ ಮಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ. ಡಿಸ್ಚಾರ್ಜ್ ಆದ ಬಳಿಕ ಈಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು ನಾನು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.