ಮುಂಬೈನಲ್ಲಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಮರ್ಸಿಡಿಸ್; ಬೈಕ್ ಸವಾರ ಸಾವು

Public TV
1 Min Read
Mumbai Accident

ಮುಂಬೈ: ವೇಗವಾಗಿ ಬಂದು ಮರ್ಸಿಡಿಸ್ ಬೆಂಜ್ (Mercedes Benz) ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮುಂಬೈನ (Mumbai) ಥಾಣೆ (Thane) ಬಳಿ ನಡೆದಿದೆ.

ಮೃತ ಯುವಕನನ್ನು 21 ವರ್ಷದ ದರ್ಶನ್ ಹೆಗ್ಡೆ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ದಾವಣಗೆರೆ | ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು

ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಸಾಲ್ವಿ ಮಾತನಾಡಿ, ರಾತ್ರಿ 1:50ರ ಸುಮಾರಿಗೆ ದರ್ಶನ್ ಹೆಗ್ಡೆ ನಿತಿನ್ ಕಂಪನಿ ಜಂಕ್ಷನ್ ಪ್ರದೇಶವನ್ನು ದಾಟುತ್ತಿದ್ದಾಗ ಮರ್ಸಿಡಿಸ್ ಬೆಂಜ್ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಬಳಿಕ ಅಲ್ಲಿಂದ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರ ಪರಿಶೀಲನೆಯ ನಂತರ ಕಾರು ಪಾರ್ಕಿಂಗ್ ಸ್ಥಳವೊಂದರಲ್ಲಿ ಸಿಕ್ಕಿದೆ. ಸದ್ಯ ನೌಪಾಡಾ (Naupada) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ಅಪಘಾತ ಸಂಭವಿಸಿದ ಪ್ರದೇಶದಲ್ಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಯ ಗುರುತು ಪತ್ತೆಗಾಗಿ ಆರ್‌ಟಿಒ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ರಾತ್ರಿ 2 ಗಂಟೆ ಸುಮಾರಿಗೆ ಅಪಘಾತದ ಸದ್ದು ಕೇಳಿಸಿದ್ದು, ಬೈಕ್‌ಗೆ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದಿದೆ. ತಕ್ಷಣ ನಾನು ಬೈಕ್ ಸವಾರನನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ದಾಖಲಿಸಿದ 15 ನಿಮಿಷಗಳ ಬಳಿಕ ಆತ ಸಾವನ್ನಪ್ಪಿದ. ಇನ್ನೂ ಡಿಕ್ಕಿ ಹೊಡೆದ ಮರ್ಸಿಡಿಸ್ ಕಾರು ಒಂದು ಕ್ಷಣವೂ ನಿಲ್ಲಿಸದೇ ಅಲ್ಲಿಂದ ವೇಗವಾಗಿ ಹೊರಟಿತು.

ಮರ್ಸಿಡಿಸ್ ಕಾರನ್ನು ಥಾರ್ ಎಸ್‌ಯುವಿ ಕಾರೊಂದು ಹಿಂಬಾಲಿಸಿಕೊಂಡು ಬರುತ್ತಿತ್ತು. ಅಪಘಾತ ನಡೆದ ಬಳಿಕ ಎರಡು ವಾಹನಗಳು ಮುಂಬೈ ಕಡೆಗೆ ತೆರಳಿದವು ಎಂದು ತಿಳಿಸಿದರು.ಇದನ್ನೂ ಓದಿ: ಮೊದಲ ಹಂತದ ಶೂಟಿಂಗ್ ಮುಗಿಸಿದ ಮಂಸೋರೆ

Share This Article