ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟಕ್ಕೆ ಶೀಘ್ರವೇ ಸರ್ಜರಿ ನಡೆಯಲಿದೆ ಎಂಬ ಸುದ್ದಿ ದಟ್ಟವಾಗುತ್ತಿದೆ. ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೈಕಮಾಂಡ್ ನಾಯಕರ ಜೊತೆ ಮಂಥನ ನಡೆಸಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಹ ಗುರುವಾರ ದೆಹಲಿಗೆ ತೆರಳಲಿದ್ದಾರೆ.
ಸಂಪುಟ ಪುನಾರಚನೆ ಜೊತೆಗೆ ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಹೈಕಮಾಂಡ್ ಜೊತೆ ಸಿಎಂ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜಮೀರ್ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ
ಜನವರಿಯಲ್ಲಿ ಸಂಪುಟ ಸರ್ಜರಿ ಜೊತೆಗೆ ಕೆಪಿಸಿಸಿಗೆ ಹೊಸ ಸಾರಥಿ ಬರುವ ನಿರೀಕ್ಷೆ ಇದೆ. ಆರ್‌ಬಿ ತಿಮ್ಮಾಪುರಗೆ ಕೊಕ್ ನೀಡಿ, ನಾಗೇಂದ್ರರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗ್ತಿದೆ. ಆದರೆ ಸಂಪುಟ ಸರ್ಜರಿ ಕುರಿತಾಗಿ ಕಾಂಗ್ರೆಸ್ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಯಾರೂ ಈ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ.
ಶಿವಮೊಗ್ಗದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸಚಿವ ಸಂಪುಟದ ಬಗ್ಗೆ ಯಾವುದೇ ಬೆಳವಣಿಗೆ ಇಲ್ಲ. ಎರಡು ವರ್ಷದ ಅವಧಿಯಾದ ನಂತರ ಸಂಪುಟ ಪುನರ್ ರಚನೆ ಆದರೆ ಒಳ್ಳೆಯದೇ. ಬೇರೆಯವರಿಗೂ ಅವಕಾಶ ಸಿಗಲಿದೆ. ನಾವೇ ಇರಬೇಕು, ಇನ್ನೊಬ್ಬರು ಬರಬಾರದು ಎಂದೇನಿಲ್ಲ. ಎಲ್ಲರೂ ತಯಾರಾಗಿರಬೇಕು ಎಂದು ತಿಳಿಸಿದರು.