– ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ಹೇಮಂತ್ ಸೊರೆನ್ ಮಾತುಕತೆ
ನವದೆಹಲಿ: ಬಿಹಾರದಲ್ಲಿ (Bihar) ಮರಳಿ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಜಾರ್ಖಂಡ್‌ನಲ್ಲೂ(Jharkhand) ಎನ್‌ಡಿಎ (NDA) ಸರ್ಕಾರ ರಚನೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಮತ್ತು ಅವರ ಪತ್ನಿ ಕಲ್ಪನಾ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ನಡುವೆ, ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ.
ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿದ್ದಾರೆ. ಅವರು ಇಂದು ದೆಹಲಿಯಿಂದ ರಾಂಚಿಗೆ ಹಿಂತಿರುಗುವ ಸಾಧ್ಯತೆಯಿದೆ.
ಕಾಂಗ್ರೆಸ್‌ನ 16 ಶಾಸಕರಲ್ಲಿ ಕನಿಷ್ಠ ಎಂಟು ಮಂದಿ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸೋರೆನ್ ನೇತೃತ್ವದ ಹೊಸ ಸರ್ಕಾರ ಸೇರಲು ಮತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹತೆಯನ್ನು ತಪ್ಪಿಸಲು ಕನಿಷ್ಠ 11 ಶಾಸಕರು ಕಾಂಗ್ರೆಸ್ ಪಕ್ಷದಿಂದ ಹೊರಹೋಗಬೇಕಾಗುತ್ತದೆ.
ಈಗ ಬರುತ್ತಿರುವ ಸುದ್ದಿಯ ಪ್ರಕಾರ ಕಲ್ಪನಾ ಸೊರೆನ್ ಅವರು ಮುಖ್ಯಮಂತ್ರಿಯಾದರೆ, ಹೇಮಂತ್ ಸೊರೆನ್ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದನ್ನೂ ಓದಿ: ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ
ಜಾರ್ಖಂಡ್ ಬಲಾಬಲ ಹೇಗಿದೆ?
ಒಟ್ಟು 81 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 41 ಸ್ಥಾನಗಳು ಬೇಕಾಗುತ್ತವೆ. ಜೆಎಂಎಂ ನೇತೃತ್ವದ ಅಸ್ತಿತ್ವದಲ್ಲಿರುವ ಮೈತ್ರಿಕೂಟದಲ್ಲಿ ಜೆಎಂಎಂ 34 ಸ್ಥಾನಗಳನ್ನು ಹೊಂದಿದೆ, ಕಾಂಗ್ರೆಸ್ 16, ರಾಷ್ಟ್ರೀಯ ಜನತಾ ದಳ 4 ಮತ್ತು ಎಡಪಕ್ಷಗಳು 2 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 21 ಶಾಸಕರನ್ನು ಹೊಂದಿದ್ದರೆ ಎಲ್‌ಜೆಪಿ, ಎಜೆಎಸ್‌ಯು, ಜೆಡಿ(ಯು) ಒಂದು ಸ್ಥಾನವನ್ನು ಪಡೆದಿವೆ.
ಮೈತ್ರಿಯಲ್ಲಿ ಬಿರುಕು ಯಾಕೆ?
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ INDIA ಒಕ್ಕೂಟಕ್ಕೆ ಜೆಎಂಎಂ ಹಲವು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಮೈತ್ರಿಯ ಭಾಗವಾಗಿ ಬಿಹಾರದಲ್ಲೂ ನಮಗೆ ಸೀಟ್ ನೀಡಬೇಕೆಂದು ಕೇಳಿತ್ತು. ಬಿಹಾರ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸಲು ಬಯಸಿತ್ತು. ಆದರೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡದ ಕಾರಣ ಕೊನೆ ಕ್ಷಣದಲ್ಲಿ ಜೆಎಂಎಂ ಸ್ಪರ್ಧಿಸದೇ ಇರಲು ನಿರ್ಧರಿಸಿತ್ತು.
ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಜೆಎಂಎಂ ನಾಯಕರು ಕಾಂಗ್ರೆಸ್ ಮತ್ತು ಆರ್‌ಜೆಡಿಯಿಂದ ನಮಗೆ ಅನ್ಯಾಯವಾಗಿದೆ. ಮುಂದೆ ಮೈತ್ರಿಯ ಬಗ್ಗೆ ಯೋಚಿಸಲಾಗುವುದು ಎಂದು ಅಂದೇ ಹೇಳಿಕೆ ನೀಡಿದ್ದರು.

