ರಾಯಚೂರು: ಸ್ವಾಮೀಜಿಗಳಿಗೆ, ಹಿರಿಯರಿಗೆ ನಾನಾ ವಸ್ತುಗಳಿಂದ ತುಲಾಭಾರ ಮಾಡುವುದನ್ನು ನೋಡಿದ್ದೇವೆ. ಆದರೆ ರಾಯಚೂರಿನ ಕಾಡ್ಲೂರಿನಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥ ಸ್ವಾಮಿಗೆ ಶಾಲಾ ಪಠ್ಯ ಸಾಮಗ್ರಿಗಳಿಂದ ತುಲಾಭಾರ ಮಾಡಲಾಯಿತು.
ತುಲಾಭಾರ ಬಳಿಕ ಪಠ್ಯ ಸಾಮಗ್ರಿಗಳಾದ ಪುಸ್ತಕ, ಜಾಮೆಟ್ರಿ ಬಾಕ್ಸ್, ಡಿಕ್ಷನರಿ, ಪೆನ್, ಪೆನ್ಸಿಲ್, ಎಕ್ಸಾಂ ಪ್ಯಾಡ್ ಅನ್ನು ಕಾಡ್ಲೂರು ಗ್ರಾಮದ ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾಡ್ಲೂರು ಗ್ರಾಮದ ವನವಾಸಿ ಶ್ರೀರಾಮದೇವರು ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದ ನೂತನ ರಾಘವೇಂದ್ರ ಮಂಗಳ ಸಭಾಂಗಣ ಉದ್ಘಾಟನಾ ಸಮಾರಂಭ ವೇಳೆ ಶ್ರೀಗಳ ತುಲಾಭಾರ ಮಾಡಲಾಯಿತು. ಕಾಡ್ಲೂರು ಸಂಸ್ಥಾನದ ವಂಶಿಕ ಯುವಕರು ಈ ವಿಶೇಷ ಪಠ್ಯ ಸಾಮಗ್ರಿ ತುಲಾಭಾರ ನೆರವೇರಿಸಿದರು. ಈ ವೇಳೆ ಪದ್ಮಶ್ರೀ ಪುರಸ್ಕೃತ ಕನ್ನಡ ಕಬೀರ ಇಬ್ರಾಹಿಂ ಸುತಾರ್ ಅವರಿಗೆ ಸನ್ಮಾನ ಮಾಡಲಾಯಿತು.
Advertisement
Advertisement
ತುಲಾಭಾರ ಮೂಲಕ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ನೀಡುವ ಕಾರ್ಯ ಮಾಡಿದ್ದು ಶ್ಲಾಘನೀಯ, ಪ್ರತಿಯೊಬ್ಬ ಯುವಕರು ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವುದು ಒಳ್ಳೆಯ ಕಾರ್ಯ ಎಂದು ಇಬ್ರಾಹಿಂ ಸುತಾರ್ ಹೇಳಿದರು. ರಾಘವೇಂದ್ರ ಮಂಗಳ ಸಭಾಂಗಣವನ್ನು ಉದ್ಘಾಟಿಸಿದ ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮಿ ವಿಶೇಷ ತುಲಾಭಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಕಾಡ್ಲೂರಿನ ರಂಗರಾವ್ ದೇಸಾಯಿ, ಜಯಕುಮಾರ್ ದೇಸಾಯಿ ನೇತೃತ್ವದಲ್ಲಿ ಗ್ರಾಮದ ಹಲವಾರು ಯುವಕರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಧಾರ್ಮಿಕ ಕಾರ್ಯಕ್ರಮದ ಜೊತೆ ವಿದ್ಯಾರ್ಥಿಗಳ ಅಗತ್ಯ ವಸ್ತುಗಳನ್ನು ತುಲಾಭಾರದ ಮೂಲಕ ಹಂಚಿದರು.