ನವದೆಹಲಿ: ಕುಸ್ತಿ ಫೆಡರೇಶನ್ ಮುಖ್ಯಸ್ಥ (WFI) ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದು ದೆಹಲಿ ಪೊಲೀಸರು (Delhi Police) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ (Special Court) ಮಾಹಿತಿ ನೀಡಿದ್ದಾರೆ.
ನ್ಯಾಯಾಲಯ ನೀಡಿದ್ದ ಆದೇಶದ ಅನ್ವಯ ಎಸ್‍ಐಟಿ ರಚಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಾವು ಎಸ್‍ಐಟಿ ರಚಿಸಿದ್ದೇವೆ. ಎಸ್‍ಐಟಿ ಪ್ರಕರಣದ ತನಿಖೆ ನಡೆಸಲಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ್ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಪೀಠಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ
ವರದಿಯನ್ನು ದೆಹಲಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ, ಪ್ರಕರಣದ ಸ್ವರೂಪವನ್ನು ಪರಿಗಣಿಸಿ ವರದಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ವಿನಂತಿಸಿದ್ದಾರೆ. ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.
ಅಪ್ರಾಪ್ತೆ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಹಲವರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತನಿಖೆಯ ವಿಚಾರಣೆ ಕೋರಿ ಕುಸ್ತಿಪಟುಗಳು ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿತ್ತು.
ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಪೋಕ್ಸೋ (POCSO) ಸೇರಿದಂತೆ ಎರಡು ಎಫ್‍ಐಆರ್‌ಗಳನ್ನು (FIR) ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಬಹುಮತ ಬರಲ್ಲ, ಅದ್ಕೆ ಬೇರೆ ಪಕ್ಷದ ಜೊತೆ ಮಾತಾಡುವ ಪ್ರಯತ್ನ ಮಾಡ್ತಿದ್ದಾರೆ – ಸಿಎಂ