ಮಲೆನಾಡಿನಲ್ಲಿ ಈಗ ಮಂಗನ ಜ್ವರದ ಹಾವಳಿ ಈಗ ಹೆಚ್ಚಾಗಿದೆ. ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಎಂದು ಕರೆಯಲ್ಪಡುವ ಸಾವಿನ ಜ್ವರಕ್ಕೆ 7 ದಶಕಗಳ ಇತಿಹಾಸವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತಿತ್ತು. ಆದರೆ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡಿದ್ದು, ಈಗಾಗಲೇ ಒಂದು ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಮಂದಿಯನ್ನು ಬಲಿತೆಗೆದುಕೊಂಡಿದೆ. ಹೀಗಾಗಿ ಇಲ್ಲಿ ಮಂಗನ ಜ್ವರ ಎಂದರೇನು? ಯಾಕೆ ಬರುತ್ತದೆ? ಏನೆಲ್ಲ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಆರಂಭಗೊಂಡಿದ್ದು ಹೇಗೆ?
ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದ ಬಳಿಕ ಅಂದರೆ 1957ರಲ್ಲಿ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು. ಈ ಕಾಯಿಲೆ ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರಿಂದ ಜನರಿಗೆ ಹರಡುತ್ತಿತ್ತು. ಆದ್ದರಿಂದ ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದು ಜನ ಕರೆದಿದ್ದರು. ಆದರೆ ವೈದ್ಯ ವಿಜ್ಞಾನಿಗಳು ಪ್ರಪಂಚದಲ್ಲಿ ಎಲ್ಲೂ ಕಾಣದ ಈ ಕಾಯಿಲೆ ಕ್ಯಾಸನೂರು ಗ್ರಾಮದಲ್ಲಿ ಮಾತ್ರ ಕಂಡು ಬಂದಿರುವುದರಿಂದ ಈ ಕಾಯಿಲೆಗೆ `ಕ್ಯಾಸನೂರು ಕಾಡಿನ ಕಾಯಿಲೆ’ ಎಂದು ಕರೆದರು.
Advertisement
Advertisement
ಕಾಯಿಲೆ ಹುಟ್ಟಿ ಎರಡು ದಶಕಗಳಾಗಿದ್ದು, ಮನುಷ್ಯರು ಕಾಡನ್ನು ನಾಶ ಮಾಡುವುದರಿಂದ ರೋಗ ಪೀಡಿತ ಮಂಗಗಳು ಕಾಡನ್ನು ಹುಡುಕುತ್ತಾ ಹೋಗುತ್ತವೆ. ಆಗ ಅವುಗಳು ಹೋದಂತೆಲ್ಲಾ ಕಾಯಿಲೆ ಕೂಡ ವಿಸ್ತರಿಸುತ್ತಾ ಹೋಗುತ್ತದೆ. ಅದರಂತೆಯೇ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹಲವು ಕಡೆ ಕಾಯಿಲೆ ಕಂಡು ಬಂದಿತ್ತು. ಬಳಿಕ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ಹರಡಿತ್ತು. ಈ ಕಾಯಿಲೆ ಸುಮಾರು 6,000 ಚದರ ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿದ್ದು, ಪ್ರತಿವರ್ಷ ಈ ಕಾಯಿಲೆಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ.
Advertisement
ಯಾವ ವೈರಣ್ ಕಾರಣ?
ಕ್ಯಾಸನೂರು ಮಂಗನ ಕಾಯಿಲೆ (KFD) ಯು KFDV ವೈರಾಣು (Kyasanur Forest disease virus) ಕುಟುಂಬಕ್ಕೆ ಸೇರಿದ ವೈರಾಣುವಾಗಿದೆ. ಇದನ್ನು 1957ರಲ್ಲಿ ಮರಣ ಹೊಂದಿದ ಮಂಗನ ದೇಹದಲ್ಲಿ ಪತ್ತೆ ಮಾಡಲಾಗಿದೆ.
Advertisement
ಹೇಗೆ ಹರಡುತ್ತದೆ?
ಕ್ಯಾಸನೂರ ಕಾಯಿಲೆ ಮೂಲತಃ ಪ್ರಾಣಿಗಳ ರೋಗವಾಗಿದ್ದು, ಮುಖ್ಯವಾಗಿ KFDV ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.
ರೋಗ ಲಕ್ಷಣ ಏನು?
– ಉಣುಗು ಕಡಿತದಿಂದ ವೈರಸ್ ಗಳು ದೇಹ ಸೇರಿದ ಒಂದು ವಾರದ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
– ವಿಪರೀತ, ಜ್ವರ, ತಲೆನೋವು, ನರದೌರ್ಬಲ್ಯ, ಮಾಂಸಖಂಡಗಳ ಸೆಳೆತ, ವಾಂತಿ ಪ್ರಾರಂಭವಾಗುತ್ತದೆ.
– ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಆದರೆ ಶೇ.10-20 ಜನರಲ್ಲಿ ಈ ಕಾಯಿಲೆಯು 2ನೇ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ.
– ಜ್ವರದ ಜೊತೆಗೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಮೂರನೇ ವಾರದ ಪ್ರಾರಂಭದಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆಯ ಲಕ್ಷಣ, ಕಣ್ಣು ಮಂಜಾಗುತ್ತದೆ.
– ರೋಗಿಯು ಕಡಿಮೆ ರಕ್ತದೊತ್ತಡ ಹಾಗೂ ಪ್ಲೇಟ್‍ಲೇಟ್, ಕೆಂಪು ರಕ್ತಕಣ ಸಂಖ್ಯೆ ಮತ್ತು ಬಿಳಿರಕ್ತಕಣಗಳ ಕೊರತೆಯಿಂದ ಬಳಲುತ್ತಾನೆ.
– ರೋಗನಿರೋಧಕ ಶಕ್ತಿಯಿರುವ ವ್ಯಕ್ತಿಯು ಒಂದೆರೆಡು ವಾರಗಳಲ್ಲಿ ಚೇತರಿಸಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ.
– 15-20 ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಈ ಕಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆ 3-5%.
ಯಾವ ಅವಧಿಯಲ್ಲಿ ಬರುತ್ತೆ?
ಶುಷ್ಕವಾತಾವರಣದ ಸಮಯದಲ್ಲಿ ಅಂದರೆ ನವೆಂಬರ್-ಜೂನ್ ತಿಂಗಳವರೆಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಾಡುತ್ಪನ್ನಗಳನ್ನು ಸಂಗ್ರಹಿಸುವ, ಬೇಟೆಗೆ ಹೋಗುವ, ಅರಣ್ಯದಲ್ಲಿ ಕೆಲಸ ಮಾಡುವ ಅಥವಾ ರೈತರಿಗೆ ಈ KFDV ವೈರಾಣು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.
ರೋಗ ಪತ್ತೆ ಹೇಗೆ?
ಪ್ರಾಥಮಿಕ ಹಂತದಲ್ಲೆ ರಕ್ತ ಪರೀಕ್ಷೆಯ ಮೂಲಕ ವೈರಾಣುವಿನ ಪತ್ತೆ ಮಾಡುವುದು ಸಾಧ್ಯ. ನಂತರದ ಹಂತದಲ್ಲಿ ಎಲಿಸಾ (Enzyme-linked imunosorbent serologic assay) ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ.
ಚಿಕಿತ್ಸೆ ಹೇಗೆ?
ನಿಖರವಾದ ಚಿಕಿತ್ಸಾ ಕ್ರಮ ಲಭ್ಯವಿಲ್ಲದಿದ್ದರೂ, ಸರಿಯಾದ ಸಮಯಕ್ಕೆ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಅತಿಮುಖ್ಯವಾಗಿದೆ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಹಾಗೂ ರಕ್ತಸ್ರಾವ ಆಗದಂತೆ ಚಿಕಿತ್ಸೆ ನೀಡುವುದು ಈ ಹಂತದಲ್ಲಿ ಬಹಳ ಮುಖ್ಯವಾಗಿವೆ. ಮಂಗನ ಕಾಯಿಲೆಯಿಂದ ರಕ್ಷಣೆ ನೀಡುವ ಲಸಿಕೆ ಲಭ್ಯವಿದೆ. ರೋಗ ಆರಂಭವಾದ ಅನಂತರ ಈ ಲಸಿಕೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರೋಗ ಆರಂಭಗೊಳ್ಳುವ ಮೂರು ತಿಂಗಳ ಮುಂಚೆ ತಿಂಗಳಿಗೆ ಒಂದು ಇಂಜೆಕ್ಷನ್ ಅಂತೆ ಎರಡು ಇಂಜೆಕ್ಷನ್ ತೆಗೆದುಕೊಂಡಲ್ಲಿ ಮಾತ್ರ ಲಸಿಕೆಯಿಂದ ರಕ್ಷಣೆ ದೊರೆಯುತ್ತದೆ.
ಮುಂಜಾಗ್ರತಾ ಕ್ರಮ ಏನು?
– ಮಂಗನ ಕಾಯಲೆ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರು, ಶುಷ್ಕವಾದ ವಾತಾವರಣ ಹಾಗೂ ಉಣುಗು ಜಾಗೃತವಾಗಿರುವ ಸಮಯದಲ್ಲಿ ದಪ್ಟನೆಯ ಬಟ್ಟೆ ಧರಿಸುವುದು, ಕಾಲಿಗೆ ಬೂಟು ಧರಿಸುವುದು ಉತ್ತಮ
– ಮಂಗಗಳು ಸತ್ತು ಬೀಳುತ್ತಿರುವುದು ಗೊತ್ತಾದ ತಕ್ಷಣ ಆ ಪ್ರದೇಶದ ಕಾಡಿಗೆ ಹೆಲಿಕಾಪ್ಟರ್ ಮೂಲಕ ಉಣುಗು ನಾಶಕ ಔಷಧಿ ಸಿಂಪಡಿಸಬೆಕು.- ಉಣುಗುಗಳು ನಿಗದಿತ ಪ್ರದೇಶದಲ್ಲಿ ಹಾಗೂ ಅನುಕೂಲಕರವಾದ ವಾತಾವರಣದಲ್ಲಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಹೀಗೆ ಸಂಖ್ಯೆ ವೃದ್ಧಿಸಿಕೊಳ್ಳುವುದಕ್ಕೆ ನೇರವಾಗಿ ನಮ್ಮಗಳ ಚಟುವಟಿಕೆಗಳು ಕಾರಣವಾಗಿರುತ್ತದೆ. ಉದಾ: ಮಲೆನಾಡಿನಲ್ಲಿ ಮನೆಯ ಹಿಂಭಾಗ ಮತ್ತು ಕಾಡಿನಂಚಿನಲ್ಲಿ ಬೆಂಕಿ ಹಾಕುವುದು ಸರ್ವೇಸಾಮಾನ್ಯವಾಗಿದೆ. ಇದರಿಂದ ಕಾಡಂಚಿನಲ್ಲಿಯ ನೈಸರ್ಗಿಕ ಮರಗಳು ಮತ್ತು ಸಸ್ಯಗಳು ನಾಶವಾಗಿ ಅಲ್ಲಿ ಯುಪಟೋರಿಯಂ ಕಳೆ ಯಥೇಚ್ಛವಾಗಿ ಬೆಳೆಯುತ್ತದೆ. ಯುಪಟೋರಿಯಂ ಗಿಡಗಳು ಉಣುಗುಗಳ ಸಂಖ್ಯಾವೃದ್ಧಿಗೆ ಪೂರಕ ಕಳೆಯಾಗಿದೆ.
– ಬೆಂಕಿಯ ನಂತರದಲ್ಲಿ ಯುಪಟೋರಿಯಂ ಕಳೆಗಿಡಗಳು ವೇಗವಾಗಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಣ್ಣಿಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ. ಇದರಿಂದ KFDV ವೈರಾಣು ಹರಡುವ ಸಾಧ್ಯತೆ ತೀರಾ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಉದ್ಧೇಶವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕಾಡಿಗೆ ಅಥವಾ ಕಾಡಿನಂಚಿಗೆ ಬೆಂಕಿ ಹಚ್ಚುವುದನ್ನು ಅಲ್ಲಿನ ವಾಸಿಗಳು ಕಡ್ಡಾಯವಾಗಿ ನಿಲ್ಲಿಸುವುದು ಈ ರೋಗವನ್ನು ತಡೆಗಟ್ಟುವ ಪ್ರಥಮ ಮಾರ್ಗವಾಗಿದೆ.
– ಕಾಯಿಲೆ ಆರಂಭಗೊಂಡಾಗ ಜನರು ಕಾಡಿಗೆ ಹೋಗುವುದನ್ನು ಬಿಡಬೇಕು. ಅನಿವಾರ್ಯವಾಗಿ ಕಾಡಿಗೆ ಹೊಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು. ತಮ್ಮ ಮತ್ತು ತಮ್ಮ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು.
– ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ಮಾಡಬಾರದು. ಕಾಡಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.
ವೈರಾಣುವಿನ 4 ಜೀವನ ಕ್ರಮಗಳು:
ಏಗಿಆಗಿ ವೈರಾಣುಗಳ ಜೀವನ ಚಕ್ರದಲ್ಲಿ ನಾಲ್ಕು ವಿಧಗಳು, 1.ಮೊಟ್ಟೆ (Egg), 2. ಶೈಶಾವಸ್ಥೆ (ಲಾರ್ವಾ), 3. ಬಾಲ್ಯಾವಸ್ಥೆ (Nimph) ಮತ್ತು 4. ಪ್ರೌಢಾವಸ್ಥೆ (Adult). ವೈರಾಣುಗಳನ್ನು ವಾನರ ಅಥವಾ ಮನುಷ್ಯರಿಗೆ ಅಂಟಿಸುವವ ಕೆಲಸ ಮಾಡುವುದು ನಿಂಫ್ ಅವಸ್ಥೆಯಲ್ಲಿರುವ ಉಣುಗು ಮಾತ್ರವಾಗಿದೆ. ಈ ರೋಗಕ್ಕೆ ಈಗಾಗಲೇ ಮುಂಜಾಗರೂಕತಾ ಲಸಿಕೆಯನ್ನು ಸಿದ್ಧ ಪಡಿಸಲಾಗಿದ್ದು, ವೈದ್ಯರ ಸಲಹೆಯಂತೆ ತೆಗೆದುಕೊಂಡಲ್ಲಿ KFDV ವೈರಾಣುವಿನಿಂದ ಸಾಯುವ ಪ್ರಮಾಣ 83% ಕಡಿಮೆಯಾಗುತ್ತದೆ.
-ಹಾಲಸ್ವಾಮಿ/ ಮಂಜುಳ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv