ಯಾದಗಿರಿ: ನಾಗರಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರೆಯುವುದು ವಿಶೇಷ ಆದರೆ ಜಿಲ್ಲೆಯ ಕಂದಕೂರು ಗ್ರಾಮದಲ್ಲಿ ಪಂಚಮಿ ದಿನದಂದೇ ವಿಶೇಷವಾಗಿ ಚೇಳಿನ ಜಾತ್ರೆ ನಡೆಯುತ್ತದೆ.
ಕಂದಕೂರು ಗ್ರಾಮದ ಬೆಟ್ಟದ ಮಧ್ಯೆ ಕೊಂಡಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತಿ ನಾಗರಪಂಚಮಿಯ ದಿನದಂದು ವಿಶೇಷವಾಗಿ ಚೇಳಿನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಈ ದೇವಾಲಯದಲ್ಲಿ ಬಲು ಅಪರೂಪದ ಚೇಳಿನ ಮೂರ್ತಿಗಳಿವೆ. ಜಾತ್ರೆಯ ದಿನದಂದು ಸಾವಿರಾರು ಚೇಳುಗಳು ಇಲ್ಲಿಗೆ ಬಂದು ಸೇರುತ್ತವೆ.
Advertisement
Advertisement
ಹಬ್ಬದಂದು ಭಕ್ತರು ಬೆಟ್ಟದ ಮೇಲಿರುವ ದೇವತೆಗೆ ಹಾಗೂ ಚೇಳಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆಯುತ್ತಾರೆ. ನಂತರ ಸುತ್ತಲಿನ ಗುಡ್ಡದಲ್ಲಿ ಹೇರಳವಾಗಿ ಸಿಗುವ ಚೇಳುಗಳನ್ನು ಹಿಡಿದು ಸಂಭ್ರಮ ಪಡುತ್ತಾರೆ. ಮಕ್ಕಳು, ಮಹಿಳೆಯರು ಹಾಗೂ ದೊಡ್ಡವರೆನ್ನದೆ ಚೇಳುಗಳನ್ನು ಕೈಮೇಲೆ ಹಾಗೂ ಮೈಮೇಲೆ ಹಾಕಿಕೊಂಡು ಜಾತ್ರೆಯನ್ನು ಆಚರಿಸುತ್ತಾರೆ.
Advertisement
ವಿಶೇಷ ಜಾತ್ರೆಯ ಕುರಿತು ಗ್ರಾಮದ ಶ್ವೇತಾ ಪ್ರತಿಕ್ರಿಯಿಸಿ, ನಾವು ಸುಮಾರು ವರ್ಷಗಳಿಂದ ದೇವರ ದರ್ಶನ ಪಡೆಯುವುದಕ್ಕೆ ಬರುತ್ತಿದ್ದೇವೆ. ದರ್ಶನದ ನಂತರ ಮಕ್ಕಳು, ಮಹಿಳೆಯರು ಎನ್ನದೇ ಎಲ್ಲರು ಸೇರಿ ಕಲ್ಲುಗಳಲ್ಲಿ ಅಡಗಿರುವ ಹಾಗೂ ಒಡಾಡಿಕೊಂಡಿರುವ ಚೇಳುಗಳನ್ನು ಯಾವುದೇ ಆತಂಕವಿಲ್ಲದೇ ಭಕ್ತಿ ಪರಾಕಾಷ್ಠೆಯಿಂದ ಹಿಡಿದುಕೊಳ್ಳುತ್ತೇವೆ. ಇಲ್ಲಿ ಕೇವಲ ನಾಗರಪಂಚಮಿ ದಿನದಂದು ಮಾತ್ರ ಚೇಳುಗಳು ಕಾಣಸಿಗುತ್ತವೆ. ಈ ಚೇಳುಗಳು ಪಂಚಮಿ ದಿನದಂದು ಯಾರಿಗೂ ಕಚ್ಚುವುದಿಲ್ಲ, ಒಂದು ವೇಳೆ ಕಚ್ಚಿದರೆ ದೇವಿಯ ಭಂಡಾರ ಹಚ್ಚುತ್ತಾರೆ. ಇದರಿಂದ ಯಾರಿಗು ಏನೂ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾರೆ.
Advertisement
ನಾಗರ ಪಂಚಮಿಯಂದು ಎಲ್ಲಾ ಕಡೆ ಕಲ್ಲು ನಾಗಪ್ಪನಿಗೆ ಹಾಲೆರೆಯುತ್ತಾರೆ. ಆದರೆ ಕೊಂಡಮ್ಮದೇವಿಯ ದೇವಸ್ಥಾನದಲ್ಲಿ ಮಾತ್ರ ಚೇಳುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ನಿಜ ಚೇಳುಗಳನ್ನು ಹಿಡಿದುಕೊಂಡು ಜಾತ್ರೆಯಲ್ಲಿ ಸಂಭ್ರಮಿಸುವುದು ವಿಶೇಷ. ಈ ಜಾತ್ರೆಗೆ ಜಿಲ್ಲೆಯ ವಿವಿಧ ಕಡೆ ಹಾಗೂ ತೆಲಂಗಾಣ, ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದು ಇಲ್ಲಿಗೆ ಆಗಮಿಸಿದ ರಾಕೇಶ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv