ಮಡಿಕೇರಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ವಿಶ್ವದೆಲ್ಲೆಡೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಕಾವೇರಿ ಆರತಿ (Cauvery Aarti) ಮಾಡುವ ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಗೆ ಅಗಮಿಸಿ ವಿಶೇಷ ಪೂಜೆ ನೇರವೇರಿಸಿ ನಂತರ ಕಾವೇರಿ ತೀರ್ಥವನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಕಾವೇರಿಗೆ ಆರತಿ ಮಾಡಲ್ಲಿದ್ದಾರೆ.
ಹೌದು. ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲೇ ಕನ್ನಡ ನಾಡಿನ ಜೀವ ನದಿ ಕಾವೇರಿ ನದಿಗೂ ಅರತಿ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಕಾವೇರಿ ನದಿಗೆ ಗೌರವ ಸಲ್ಲಿಸುವ ಕ್ರಮವಾಗಿ ಬೆಂಗಳೂರಿನ (Bengaluru) ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಪೂಜೆಗೆ ಪೂರ್ವ ತಯಾರಿ ನಡೆದಿದೆ. ಅಲ್ಲದೇ ಈ ಕಾರ್ಯಕ್ರಮ ಗಿನ್ನಿಸ್ ದಾಖಲೆ ಮಾಡುವ ನಿಟ್ಟಿನಲ್ಲಿ ಜಲಮಂಡಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.
ಕಾವೇರಿ ಆರತಿ ಮಾಡುವ ಬಗ್ಗೆ ಇತ್ತೀಚೆಗೆ ವಾರಣಾಸಿಗೆ ತೆರಳಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ತಂಡ ಅಧ್ಯಯನ ನಡೆಸಿತ್ತು. ಈ ವಿಶೇಷ ಸಂಭ್ರಮಕ್ಕೆ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಪುರೋಹಿತರನ್ನು ಕರೆಸಲಾಗಿದೆ. ಅದರಂತೆ ಬೆಂಗಳೂರಿನಲ್ಲೂ ಕಾವೇರಿ ಆರತಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಲಮಂಡಲಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತವರ ಕುಟುಂಬ ಸೇರಿ ಹತ್ತು ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಇನ್ನೂ ಕಾವೇರಿ ಅರತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಾವೇರಿಯ ಉಗಮ ಸ್ಥಾನಕ್ಕೆ ಶುಕ್ರವಾರ (ಮಾ.21) ಬೆಳಿಗ್ಗೆ 8 ಗಂಟೆಗೆ ತಲಕಾವೇರಿ ಸನ್ನಿಧಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ನೇರವಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಲಕಾವೇರಿಗೆ ಆಗಮಿಸಲಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಎ.ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.
ಕಾವೇರಿ ತಾಯಿ ಸನ್ನಿಧಿಯಲ್ಲಿ, ಕಾವೇರಿ ಆರತಿ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ತಾಯಿ ಕಾವೇರಿಯ ಪವಿತ್ರ ತೀರ್ಥದೊಂದಿಗೆ ರಾಜಧಾನಿಗೆ ಮರಳಲಿದ್ದಾರೆ.