ವಿಜಯಪುರ: ಕಟ್ಟಡ ಕಾರ್ಮಿಕರಾಗಿದ್ದ ಇಲ್ಲಿನ ಶಿಕಾರಿಖಾನೆ ನಿವಾಸಿಯಾಗಿರೋ ಚಂದ್ರಕಾಂತ ದೊಡ್ಡಮನಿ 2 ವರ್ಷಗಳ ಹಿಂದೆ ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮುಚ್ಚದೆ ಬಿಟ್ಟಿದ್ದ ಗಟಾರಕ್ಕೆ ಬಿದ್ದಿದ್ದಾರೆ. ಆದರೆ ಈ ಗಟಾರಕ್ಕೆ ಒಳಚರಂಡಿಯ ಸಂಪರ್ಕವು ಇದ್ದು ಸಾಕಷ್ಟು ಹೂಳು ತುಂಬಿದ್ದ ಕಾರಣ ಚಂದ್ರಕಾಂತಗೆ ಮೇಲ್ಗಡೆ ಬರಲಾಗದೆ ಅಲ್ಲೆ ಸಾವನ್ನಪ್ಪಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ಚಂದ್ರಕಾಂತನ ಸಾವಿನಿಂದ ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.
ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಇದೀಗ ಅಮಾಯಕ ಕೂಲಿ ಕಾರ್ಮಿಕನ ಕುಟುಂಬ ಬೀದಿಗೆ ಬಂದಿದೆ. ಚಂದ್ರಕಾಂತ್‍ಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒರ್ವ ಹೆಣ್ಣು ಮಗಳ ಮದುವೆಯಾಗಿದೆ. ಇನ್ನು ಜೀವನ ನಿರ್ವಹಣೆಗಾಗಿ ಚಂದ್ರಕಾಂತ ಹೆಂಡತಿ ನಿಂಗವ್ವ, ಮಗ ಸಂತೋಷ ಮತ್ತು ಮಗಳು ಬೋರಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
Advertisement
ನಗರದಲ್ಲಿ ಜೀವನ ನಿರ್ವಹಣೆ ಹೆಚ್ಚಾಗಿದ್ದರಿಂದ ಚಂದ್ರಕಾಂತ ಕುಟುಂಬ ಜಿಲ್ಲೆಯ ಇಂಡಿ ತಾಲೂಕಿನ ತದ್ದೆವಾಡ ಗ್ರಾಮದಲ್ಲಿ ನೆಲೆಸಿದ್ದಾರೆ. ಇನ್ನು ಮಗಳು ಬೋರಮ್ಮಗೆ ಮದುವೆ ವಯಸ್ಸಾಗಿದ್ದು, ಮದುವೆ ಮಾಡಲು ನಿಂಗವ್ವ ಪರದಾಡುತ್ತಿದ್ದಾರೆ. ಚಂದ್ರಕಾಂತರ ಹಠಾತ್ ಸಾವಿನಿಂದ ಮಗ ಸಂತೋಷ ಜೀವನ ನಿರ್ವಹಣೆಗಾಗಿ ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.
Advertisement
ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಚಂದ್ರಕಾಂತ ಕುಟುಂಬ ಬೀದಿಗೆ ಬಿದ್ದಿದ್ದು, ಇವರಿಗೆ ಕಾರ್ಮಿಕ ಇಲಾಖೆಯಿಂದಾಗಲಿ ಅಥವಾ ಮಹಾನಗರ ಪಾಲಿಕೆಯಿಂದಾಗಲಿ ಯಾವುದೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದಿಂದಾದರು ಈ ಕುಟುಂಬಕ್ಕೆ ಬೆಳಕಾಗಲಿ ಅನ್ನೋದು ನಮ್ಮ ಆಶಯ.