ಕೊಪ್ಪಳ: ಗವಿಮಠ ಜಾತ್ರೋತ್ಸವದ ಪ್ರಸಾದದಲ್ಲಿ ಇಂದು (ಜ.7) ವಿಶೇಷವಾಗಿ ಹಪ್ಪಳ ತಯಾರಿಸಿ, ಸುಮಾರು 2 ಲಕ್ಷಕ್ಕೂ ಅಧಿಕ ಹಪ್ಪಳ ವಿತರಣೆ ಮಾಡಿದರು. ಇದೇ ಮೊದಲ ಬಾರಿಗೆ ಗವಿಸಿದ್ದೇಶ್ವರ ಜಾತ್ರೋತ್ಸವದ ಪ್ರಸಾದದಲ್ಲಿ ಹಪ್ಪಳ ನೀಡುತ್ತಿರುವುದು ವಿಶೇಷ.
ದಾಸೋಹದ ಪ್ರಸಾದದಲ್ಲಿ ಮಿರ್ಚಿ ಸವಿದ ಭಕ್ತರಿಗೆ ಈ ಬಾರಿ ಹಪ್ಪಳವೂ ಸಿಕ್ಕಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಸಿರಿಗೇರಿ-ದಾಸಾಪೂರ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಹಪ್ಪಳ ಉಣಬಡಿಸಿದ್ರು. ಗವಿಶ್ರೀ ಗೆಳೆಯರ ಸೇವಾ ಬಳಗ-ಉದಯ ಗ್ರೂಪ್ ಎಂಬ ಹೆಸರಿನ ಸುಮಾರು 70 ರಿಂದ 80 ಭಕ್ತರ ತಂಡ ಈ ಬಾರಿ ಜಾತ್ರೆಯಲ್ಲಿ ಭಕ್ತರಿಗೆ ಹಪ್ಪಳ ವಿತರಣೆ ಮಾಡಿದ್ರು. ಸಿರುಗುಪ್ಪ ತಾಲೂಕು ಸಿರಿಗೇರಿ-ದಾಸಾಪೂರ ಸೇರಿ ಸುತ್ತಲಿನ ಗ್ರಾಮಸ್ಥರು ಸೇರಿ ರಚಿಸಿರುವ ತಂಡ ಕಳೆದ 8 ವರ್ಷದಿಂದ ಶ್ರೀಮಠದ ಜಾತ್ರೆಯಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ತಮ್ಮ ಸೇವೆಯ ಜೊತೆಗೆ ವಿಶೇಷವಾಗಿ ಏನಾದರೂ ನೀಡಬೇಕು ಎಂದು ಯೋಚಿಸಿ, ಪ್ರಸಾದದಲ್ಲಿ ಹಪ್ಪಳ ನೀಡಿದ್ದಾರೆ. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿ ಊರೆಲ್ಲಾ ಸುತ್ತಾಡಿದ ಮಹಿಳೆ – ಬಾಡಿಗೆ ಕೇಳಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕ್ತೀನಿ ಅಂತಾ ಧಮ್ಕಿ
2 ಲಕ್ಷ ಹಪ್ಪಳ: ಜಾತ್ರೋತ್ಸವದ ಮಹಾ ಪ್ರಸಾದದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಪ್ಪಳ ನೀಡುತ್ತಿರುವುದು ಇದೇ ಮೊದಲು. ಉದಯ ಗ್ರೂಪ್ ತಂಡ 5 ಕ್ವಿಂಟಾಲ್ ರೆಡಿಮೇಡ್ ಹಪ್ಪಳ ಖರೀದಿಸಿದೆ. ಇದರ ಜೊತೆಗೆ ಸುಮಾರು 10 ರಿಂದ 15 ಡಬ್ಬಿ ಅಡುಗೆ ಎಣ್ಣೆ ಬಳಕೆ ಮಾಡಿ, ಹಪ್ಪಳದ ಸಪ್ಪಳ ಮಾಡಿದ್ದಾರೆ. ಸುಮಾರು 5 ಕಡಾಯಿ ಇರಿಸಿ ಹಪ್ಪಳ ಕರಿಯುತ್ತಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಹಪ್ಪಳ ತಯಾರಿ ಮಾಡಿಕೊಂಡಿದ್ದಾರೆ. ಕಳೆದ 11 ವರ್ಷದಿಂದ ಮಿರ್ಚಿ ರುಚಿ ನೋಡುತ್ತಿದ್ದ ಭಕ್ತರಿಗೆ ಈ ಬಾರಿ ಹಪ್ಪಳ ಲಭ್ಯವಾಗಿದೆ.
ಗವಿಮಠ ಜಾತ್ರೆ ವರ್ಷವೂ ವಿಶೇಷ: ಗವಿಸಿದ್ದೇಶ್ವರ ಜಾತ್ರೋತ್ಸವ ಮತ್ತು ಶ್ರೀಮಠದಿಂದ ನಡೆಯುವ ಮಹಾ ಪ್ರಸಾದದ ವ್ಯವಸ್ಥೆಯಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಹೊಸತನ ಇರುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಹೋಟೆಲ್‌ನಲ್ಲೇ ಒಂದು ಬಿಟ್ಟು ಮತ್ತೊಂದು ಹಪ್ಪಳ ಕೇಳಿದರೆ ಬೇಸರಿಸಿಕೊಳ್ಳುವುದು ನಾವೆಲ್ಲ ನೋಡಿದ್ದೇವೆ. ಕಾರಣ, ಹಪ್ಪಳ ತಯಾರಿ ಕಷ್ಟ ಮತ್ತು ದುಬಾರಿ ಅಂತಾ. ಆದರೆ, ಗವಿಮಠದಲ್ಲಿ ಲಕ್ಷಾಂತರ ಜನರಿಗೆ ಹಪ್ಪಳ ತಯಾರು ಮಾಡಿ ಪ್ರಸಾದದ ಜೊತೆ ನೀಡಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ- ರಾಜ್ಯವೇ ತಲೆ ತಗ್ಗಿಸೋ ಘಟನೆ: ವಿಜಯೇಂದ್ರ

