ಮಡಿಕೇರಿ: ತಲಕಾವೇರಿಯಲ್ಲಿ ಹುಟ್ಟಿ ದಕ್ಷಿಣ ಭಾರತದಲ್ಲಿ ಹರಿಯುವ ಕಾವೇರಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ನಡೆಯಿತು.
ಭಾಗಮಂಡಲದ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದಿಂದ ಉತ್ಸವ ಮಂಟಪವನ್ನು ತ್ರಿವೇಣಿ ಸಂಗಮಕ್ಕೆ ತಂದು ಮಳೆ ಕಡಿಮೆಯಾಗಿ ಕಾವೇರಿ ಮಾತೆ ಶಾಂತವಾಗಿ ಹರಿಯಲಿ ಎಂದು ಪ್ರಾರ್ಥಿಸಿ ಬಾಗಿನವನ್ನು ಸಮರ್ಪಣೆ ಮಾಡಲಾಯಿತು. ಪ್ರತಿವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಾಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತದೆ.
ಈ ವೇಳೆ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬಾಳೆ ಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡೋ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಸೇರಿದಂತೆ ಮುಂತಾದ ಪೂಜಾ ವಸ್ತುಗಳನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆಮಾಡಲಾಗುತ್ತದೆ. ಅಲ್ಲದೇ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.
ರಾಜ್ಯದಲ್ಲಿ ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವುಮಾಡಿದ ಕಾವೇರಿಗೆ ವಂದಿಸುತ್ತಾ, ಮುಂದೆ ಪ್ರವಾಹ ಬಾರದಂತೆ ಬೇಡೋದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ದಾಭಕ್ತಿಯಿಂದ ವರ್ಷವಿಡೀ ಅನ್ನ ನೀರು ನೀಡೋ ಮಾತೆಗೆ ವಂದಿಸಿ ಪುನೀತರಾಗುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews