ಬಾಗಲಕೋಟೆ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟೆ ನಗರದ ಕಿಲ್ಲಾ ಏರಿಯಾದ ಗುರು ರಾಘವೇಂದ್ರ ರಾಯರ ಮಠದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ, ರಾಯರ ಬೃಂದಾವನಕ್ಕೆ ಜಲಾಭಿಷೇಕ ಹಾಗೂ ಹೋಮ ಹವನ ಹಾಗೂ ಜಪಯಜ್ಞಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಮಡಿವಂತಿಕೆಯಿಂದ ಮಠಕ್ಕೆ ಬಂದು ರಾಯರ ಜಪಯಜ್ಞಗಳನ್ನು ಮಾಡಿ ಗ್ರಹಣ ಗಂಡಾಂತರವನ್ನು ದೂರ ಮಾಡಿಕೊಂಡರು.
Advertisement
Advertisement
ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ಗ್ರಹಣ ವೇಳೆಯಲ್ಲಿ ದೇವಿಗೆ ಜಲಾಭಿಷೇಕ ನೆರವೇರಿಸಲಾಯಿತು. ಗ್ರಹಣ ಮೋಕ್ಷದವರೆಗೆ ದೇವಿ ಗರ್ಭಗುಡಿ ದರ್ಶನಕ್ಕೆ ಅವಕಾಶವಿರಲಿಲ್ಲ, ಯಾವುದೇ ಪೂಜೆ ಸಹ ಇರಲಿಲ್ಲ. ಹೊರಗಡೆಯಿಂದ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
Advertisement
ಗ್ರಹಣ ಮೋಕ್ಷದ ನಂತರ ದೇವಿಗೆ ಹಾಲು, ಹಣ್ಣು ಅಭಿಷೇಕ, ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಹೇಳಿದರು. ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ ಅಯ್ಯಪ್ಪ ಮಾಲಾಧಾರಿಗಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಜಪ ಯಜ್ಞಗಳನ್ನುನೆರವೇರಿಸಿದರು.
Advertisement
ಗ್ರಹಣ ವೀಕ್ಷಣೆಗಾಗಿ ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜ್ ಮೈದಾನದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗ್ರಹಣ ವೀಕ್ಷಣೆ ಮಾಡಿದರು. ಉಳಿದಂತೆ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು ಗ್ರಹಣ ವೀಕ್ಷಣೆ ಮಾಡಿ, ಗ್ರಹಣ ರೂಪ ಬದಲಾಗ್ತಿರೋ ಬಗ್ಗೆ ಮಾಹಿತಿ ಪಡೆದರು.