ಶ್ರಾವಣ ಬಂತು ಎಂದರೆ ಸಾಕು ಒಂದಾದ ಮೇಲೆ ಒಂದರಂತೆ ಹಬ್ಬಗಳು ಬರುತ್ತಲೇ ಇರುತ್ತವೆ. ಶ್ರಾವಣ ಆರಂಭವಾಗುತ್ತಲೇ ಪ್ರಾರಂಭವಾಗುವ ಹಬ್ಬ ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು. ಎರಡು ದಿನಗಳ ಕಾಲ ನಾಗನಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹಬ್ಬದ ಸಂಭ್ರಮ ಶುರುವಾಗುವುದೇ ಸಿಹಿ ತಿಂಡಿಗಳು, ಇನ್ನಿತರ ಖಾದ್ಯಗಳನ್ನು ತಯಾರಿಸುವ ಮೂಲಕ. ನಾಗರ ಪಂಚಮಿ ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೇ ಚಕ್ಕಲಿ, ಉಂಡೆ, ಕಡುಬು, ಎಳ್ಳುಂಡೆ, ಬೇಸನ್ ಲಾಡು, ರವೆ ಉಂಡೆ, ಶೇಂಗಾ ಉಂಡೆ, ಹೋಳಿಗೆ, ಚುರುಮುರಿ ಸೇರಿ ಇನ್ನಿತರ ವಿವಿಧ ರೀತಿಯ ತಿನಿಸುಗಳ ಸುಗಂಧ ಮನೆ ತುಂಬೆಲ್ಲ ಹರಡಿಕೊಳ್ಳುತ್ತದೆ. ಈ ಸುಗಂಧದಿಂದಲೇ ಹೇಳಿಬಿಡಬಹುದು ನಾಗರ ಪಂಚಮಿ ಶುರುವಾಗಿದೆ ಅಂತ. ಇವುಗಳು ಕೇವಲ ಹಬ್ಬಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದನ್ನು ಉಂಟು ಮಾಡುತ್ತವೆ.
ಇನ್ನು ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಒಂದು ದಿನ ಮನೆಯೊಳಗೆ ನಾಗಪ್ಪನ ಮೂರ್ತಿಗೆ ಹಾಲೆರೆದರೆ, ಎರಡನೇ ದಿನ ಹೊರಗಡೆ ನಾಗಪ್ಪನ ದೇಗುಲಕ್ಕೆ ತೆರಳಿ ಹಾಲಿರೆಯಲಾಗುತ್ತದೆ. ಮನೆಯೊಳಗೆ ಹಾಗೂ ದೇವಾಲಯಕ್ಕೆ ತೆರಳಿ ಹಾಲೆರೆದಾಗ ಎರಡು ಬಾರಿ ಅಭಿಷೇಕ ಮಾಡಲಾಗುತ್ತದೆ. ಮೊದಲಿಗೆ ಒಣ ಕೊಬ್ಬರಿಯಲ್ಲಿ ಹಾಲು ಹಾಕಿ, ಅದಕ್ಕೆ ತುಪ್ಪ ಸೇರಿಸಿ ಹಾಲೆರೆಯಲಾಗುತ್ತದೆ. ಎರಡನೇ ಬಾರಿಗೆ ನೀರಿಗೆ ತುಪ್ಪ ಬೆರೆಸಿ ಎರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ.
ನಾಗಪ್ಪನಿಗೆ ಎಳ್ಳು , ಎಳ್ಳುಂಡೆ, ತಂಬಿಟ್ಟು, ಇನ್ನಿತರ ಖಾದ್ಯಗಳನ್ನು ಇರಿಸಿ ನೈವೇದ್ಯ ಮಾಡಲಾಗುತ್ತದೆ. ಅರಿಶಿಣ ದಾರವನ್ನು ನಾಗಪ್ಪನಿಗೆ ಹಾಕಿ, ಬಳಿಕ ಹಾಲೆರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ. ಹಾಲೆರೆದ ಬಳಿಕ ನಾಗಪ್ಪನಿಗೆ ಹಾಕಿದ ದಾರವನ್ನ ತೆಗೆದು ಮನೆಯಲ್ಲಿರುವವರು ತಮ್ಮ ಕೊರಳಿಗೆ ಅಥವಾ ಕೈಗೆ ಕಟ್ಟಿಕೊಳ್ಳುವ ರೂಢಿ ಇದೆ.
ಜೋಕಾಲಿಯ ಸಂಭ್ರಮ:
ನಾಗರ ಪಂಚಮಿ ಬಂತೆಂದರೆ ಸಾಕು ಎಲ್ಲರ ಮನೆಯದುರುಗಡೆ, ಒಳಗಡೆ ಜೋಕಾಲಿ ಕಾಣುವುದು ಸಾಮಾನ್ಯ. ಇದು ಜೋಕಾಲಿಯ ಪಂಚಮಿ ಎಂದರೆ ಹೇಳಬಹುದು. ಜೀವನವು ಜೋಕಾಲಿ ಎಂಬಂತೆ ಏರಿಳಿತಗಳನ್ನು ಹೊಂದಿರುತ್ತದೆ ಎಂಬುದು ಇದರ ಸಂಕೇತವಾಗಿದೆ. ಇನ್ನು ಅಣ್ಣ ತಂಗಿಯ ಮನೆಗೆ ಹೋಗುವುದು. ಹುತ್ತಿಗೆ ಹಾಲೆರೆದಾಗ ಹುತ್ತದ ಮಣ್ಣನ್ನು ತಂದು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿದಾಗ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ.
ಉತ್ತರ ಕರ್ನಾಟಕದಲ್ಲಿ ಕೊಬ್ಬರಿ ಕುಬುಸ:
ಉತ್ತರ ಕರ್ನಾಟಕದಲ್ಲಿ ಆಷಾಢ ಮುಗಿದು ಶ್ರಾವಣ ಬಂತೆಂದರೆ ಸಾಕು ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಪೈಕಿ ಕೊಬ್ಬರಿ ಕುಬುಸ ಕೊಡುವುದು ಒಂದು ಸಂಪ್ರದಾಯ. ಅಣ್ಣ ತಂಗಿಯ ಮನೆಗೆ ಹೋಗಿ ತವರು ಮನೆಯಿಂದ ತಂದ ಕೊಬ್ಬರಿ ಕುಬುಸವನ್ನು ನೀಡುತ್ತಾರೆ. ಇದರಲ್ಲಿ ಸಿಹಿ ತಿಂಡಿಗಳು ಸೇರಿದಂತೆ ಹಬ್ಬಕ್ಕೆ ಮಾಡಿದ ಎಲ್ಲಾ ಖಾದ್ಯಗಳನ್ನು ಕೊಟ್ಟಿರುತ್ತಾರೆ. ಅದರ ಜೊತೆಗೆ ಒಂದು ಕುಪ್ಪಸವನ್ನು ಕೊಡುತ್ತಾರೆ. ಅದರಲ್ಲಿ ಒಣ ಕೊಬ್ಬರಿಯನ್ನು ಇಟ್ಟಿರುತ್ತಾರೆ. ಹೀಗಾಗಿ ಇದನ್ನು ಕೊಬ್ಬರಿ ಕುಬುಸ ಎಂದು ಕರೆಯಲಾಗುತ್ತದೆ.