ಚಿಕ್ಕಬಳ್ಳಾಪುರ: ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತರೂ, ಜೆಡಿಎಸ್ ಪಕ್ಷದಿಂದ ಕಾರ್ಯಕರ್ತರು ಹಾಗೂ ಮತದಾರರಿಗೆ ಭರ್ಜರಿ ಬಾಡೂಟ ಉಣಬಡಿಸಲಾಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮುಷ್ಟೂರು ಗ್ರಾಮದಲ್ಲಿ ಜೆಡಿಎಸ್ ಮುಖಂಡ ಶ್ರೀಧರ್, ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ ಮತದಾರರಿಗೆ ಹಾಗೂ ತಿಪ್ಪೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬಾಡೂಟ ಆಯೋಜನೆ ಮಾಡಿದ್ದರು. ಬಾಡೂಟದಲ್ಲಿ ಮಟನ್ ಬಿರಿಯಾನಿ, ಚಿಕನ್ ಸಾಂಬಾರ್, ಚಿಕನ್ ಚಿಲ್ಲಿ ಸವಿದ ಮತದಾರರು ಫುಲ್ ಖುಷ್ ಆಗಿದ್ದರು.
Advertisement
Advertisement
ಉಪಚುನಾವಣೆ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ 35,869 ಮತಗಳನ್ನ ಪಡೆದು ಪರಾಭವಗೊಂಡಿದ್ದರು. ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಕೆ ಸುಧಾಕರ್ 84,389 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜಿನಪ್ಪ ವಿರುದ್ಧ 34,801 ಮತಗಳ ಅಂತರದಿಂದ ಜಯಗಳಿಸಿ ವಿಜೇತರಾಗಿದ್ದರು. ಆದರೆ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರು ಮುಖಂಡರಿಗೆ ಚುನಾವಣಾ ಸಮಯದಲ್ಲಿ ಬಾಡೂಟ ಆಯೋಜನೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗಿತ್ತು. ಹಾಗಾಗಿ ಚುನಾವಣೆ ಮುಗಿದ ಬಳಿಕ ಬಾಡೂಟ ಆಯೋಜನೆ ಮಾಡಿದ್ದೇವೆ ಎಂದು ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಡೂಟದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನೇಗೌಡ, ರಾಜಕಾಂತ್ ಸೇರಿ ಜೆಡಿಎಸ್ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಮತದಾರರು ಹಾಜರಿದ್ದರು.