ಕೊಪ್ಪಳ: ಮದುವೆ ಎಂದ್ಮೇಲೆ ಅದೊಂದು ಖಾಸಗಿ ಕಾರ್ಯಕ್ರಮ, ಅವರವರ ಅನುಕೂಲ ತಕ್ಕಂತೆ, ಆಚಾರ ವಿಚಾರ ಸಂಪ್ರದಾಯಗಳಿಂದ ಮದುವೆ ಮಾಡಿಕೊಳ್ಳೋದು ಸಾಮಾನ್ಯ. ಆದರೆ ಇಲ್ಲೊಂದು ಸಿಂಪಲ್ ಮದುವೆ ನಡೆಯಿತು. ಆ ಮದುವೆ ಸಂಪ್ರದಾಯದೊಂದಿಗೆ ಸಾಮಾಜಿಕ ಕಳಕಳಿಯಿಟ್ಟುಕೊಂಡು, ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು.
ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ದ್ಯಾಮಣ್ಣ ಹಾಗೂ ನಿರ್ಮಲಾ ತಮ್ಮ ಮದುವೆಯಲ್ಲಿ ಸಾಮಾಜಿಕವಾಗಿ ಏನಾದರೂ ವಿಶೇಷ ಕಾರ್ಯಕ್ರಮ ಮಾಡಬೇಕೆಂದುಕೊಂಡಿದ್ದರು. ತಮ್ಮ ಮದುವೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಮಾಡಿದ್ದರು. ಅದರಂತೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕೆಂದು ಪ್ರತಿಜ್ಞೆ ಮಾಡಿಸಲಾಯಿತು. ಮತದಾನದ ಬಗ್ಗೆ ಜಾಗೃತಿ ಮಾಡಲಾಯಿತು. ಅಲ್ಲದೇ ಮತ ಹಾಕುವ ಇವಿಎಂ ಮಷಿನ್ ಬಗ್ಗೆ ತಿಳುವಳಿಕೆ ಕೂಡ ನೀಡಲಾಯಿತು.
ಮದುವೆಗೆ ಬಂದ ಪ್ರತಿಯೊಬ್ಬರಿಗೂ ಮತದಾನದ ಜಾಗೃತಿ ಮೂಡಿಸಲಾಯಿತು. ಮದುವೆಗೆ ಬಂದ ಅತಿಥಿಗಳಿಗೆ ವಿವಿಪ್ಯಾಟ್ ಮೂಲಕ ಹೇಗೆ ಮತದಾನ ಮಾಡಬೇಕು ಎನ್ನುವುದರ ಬಗ್ಗೆ ತಿಳುವಳಿಕೆ ನೀಡಲಾಯಿತು. ದ್ಯಾಮಣ್ಣ ಶಿವಲಿಂಗಪ್ಪ ಬೇವೂರ್ ಮೂಲತಃ ಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಹೇಳಿಕೊಳ್ಳೋಕೆ ಅಷ್ಟೊಂದು ಶ್ರೀಮಂತರು ಅಲ್ಲ. ಆದರೂ ತನ್ನ ಮದುವೆ ಜೊತಗೆ ನಾಲ್ಕು ಜನರ ಕಡು ಬಡವರ ಮದುವೆಯನ್ನು ಮಾಡಿದ್ದಾರೆ. ಈ ಮೂಲಕ ನಾವು ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ದೃಷ್ಟಿಯಿಂದ ನಾನು ಬಡವರ ಮದುವೆ ಮಾಡಿದ್ದೇನೆ ಎನ್ನುವುದು ದ್ಯಾಮಣ್ಣ ಅಭಿಪ್ರಾಯ.
ಮಹಿಳಾ ಸಂಘಟನೆಯವರು ಬೆಂಬಲದೊಂದಿಗೆ ಒಂದೇ ವೇದಿಕೆಯಲ್ಲಿ ಒಟ್ಟು ಐದು ಜನರ ಸರಳ ವಿವಾವ ನೆರವೇರಿತು. ಮದುವೆಗೆ ಬಂದ ಜನರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳದ ಕೀರ್ತಿ ಹೆಚ್ಚಿಸಿದ ಇಬ್ಬರು ಕ್ರೀಡಾಪಟು ಹಾಗೂ ಓರ್ವ ಮಹಿಳಾ ಸಾಧಕಿಗೆ ಸನ್ಮಾನ ಮಾಡಲಾಯಿತು. ಇನ್ನು ಮದುವೆಗೆ ಬಂದ ಜನ ಮಶೀನ್ ಮೂಲಕ ಡೆಮೋ ವೋಟ್ ಹಾಕಿ ಹೋಗೋ ದೃಶ್ಯ ಕಂಡು ಬರ್ತಿತ್ತು.
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಅಮೂಲ್ಯ ಗಳಿಗೆ, ಕೆಲವರು ಆಡಂಬರದಿಂದ ಮದುವೆ ಮಾಡಿಕೊಂಡು ಬೀಗುತ್ತಾರೆ. ಆದ್ರೆ ಬೇವೂರ್ ಹಾಗೂ ಕುರ್ನಾಳ್ ಬಂಧುಗಳ ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ ಮೂಡಸಿದ್ದು ವಿಶೇಷವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv