ಮಂಗಳೂರು: ಮದುವೆಯನ್ನು ಅಪರೂಪ ಎನ್ನುವಂತೆ ಮಾಡಿಕೊಳ್ಳುವುದು ಕೆಲವರಿಗೆ ಇಷ್ಟ. ಹಾಗೆಯೇ ನೀರಿನಲ್ಲಿ, ವಿಮಾನದಲ್ಲಿ, ಮತ್ತು ರೋಪ್ ವೇನಲ್ಲಿ ಮದುವೆಯಾಗೋದನ್ನು ಕೇಳಿದ್ದೇವೆ. ಅದೇ ರೀತಿ ಮದುವೆ ನಂತರ ಕಾರಿನಲ್ಲಿ, ಕುದುರೆ ಮೇಲೆ ದಿಬ್ಬಣ ಹೋಗುತ್ತಾರೆ. ಆದರೆ ಇಲ್ಲೊಬ್ಬ ವರ ಜೆಸಿಬಿಯಲ್ಲೇ ದಿಬ್ಬಣ ಹೊರಟಿದ್ದಾರೆ.
ಜೆಸಿಬಿ ಆಪರೇಟರ್ ತನ್ನ ಮದುವೆಯ ದಿಬ್ಬಣವನ್ನು ಜೆಸಿಬಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರ್ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಕಿಮೀ ಉದ್ದಕ್ಕೂ ಜೆಸಿಬಿ ಮುಂದೆ ಕುಳಿತುಕೊಂಡು ಮೆರವಣಿಗೆ ನಡೆಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಚೇತನ್ ಮತ್ತು ಮಮತಾ ದಂಪತಿಯ ಮದುವೆ ಸೋಮವಾರ ನಡೆದಿದ್ದು, ಮದುವೆ ಬಳಿಕ ಮೆರವಣಿಗೆ ಜೆಸಿಬಿ ಮತ್ತು ವಾಲಗದ ಜೊತೆಗೆ ನಡೆದಿದೆ. ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯವಾಗಿ ಹೆಸರು ಮಾಡಿದ್ದರು. ಆದ್ದರಿಂದ ತಮ್ಮ ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದಿದ್ದಾರೆ.