ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಪರಿಸರ ಪ್ರೇಮಿಯೊಬ್ಬರ ವಿವಾಹ ಮಹೋತ್ಸವಕ್ಕೆ ಇಡೀ ಊರೇ ಮಧುವಣಗಿತ್ತಿಯಂತೆ ಸಜ್ಜುಗೊಂಡಿದ್ದು, ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.
ಕಾಟಪ್ಪ ಮತ್ತು ಜ್ಯೋತಿ ಸೇರಿದಂತೆ ಇನ್ನೂ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2018 ಆಗಸ್ಟ್ 15 ರಂದು ಗ್ರಾಮದ ಯೋಧ ಚಂದ್ರಪ್ಪನ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿದ ಗ್ರಾಮಸ್ಥರು ಅಂದು 30ಕ್ಕೂ ಹೆಚ್ಚು ಸಸಿಗಳನ್ನ ನೆಟ್ಟಿದ್ದರು. ನೆಟ್ಟ ಸಸಿಗಳು ಹಾಳಾಗಬಾರದು, ಅದನ್ನು ಸಂರಕ್ಷಣೆ ಮಾಡಬೇಕು ಎಂದು ಗ್ರಾಮದ ಯುವಕ ಕಾಟಪ್ಪರಿಗೆ ಜವಾಬ್ದಾರಿ ನೀಡಿದ್ದರು. ಅಂದಿನಿಂದ ಕಾಟಪ್ಪ ಪ್ರತಿನಿತ್ಯ ಸಸಿಗಳಿಗೆ ನೀರೆರೆದು ಪೋಷಣೆ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಕುಡಿವ ನೀರಿಗೆ ಸಮಸ್ಯೆ ಇದ್ದರೂ ಕಾಟಪ್ಪ ಮನಗೆ ನೀರು ತೆಗೆದುಕೊಂಡು ಹೋಗದೆ ಹಗಲು-ರಾತ್ರಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದರು.
Advertisement
Advertisement
ಕಾಟಪ್ಪನ ಶ್ರದ್ಧೆ ಕಂಡ ಗ್ರಾಮಸ್ಥರು ಅವರಿಗೆ ಸನ್ಮಾನ ಮಾಡಬೇಕು ಎಂದು ಯೋಚನೆ ಮಾಡಿದ್ದರು. ಅದೇ ವೇಳೆಗೆ ಗ್ರಾಮದ ಯೋಧ ಚಂದ್ರಪ್ಪ, ಕಾಟಪ್ಪನಿಗೆ ಮದುವೆ ವಯಸ್ಸಾಗಿದೆ, ಮನೆಯಲ್ಲೂ ಬಡತನವಿದೆ. ಹೀಗಿರುವಾಗ ಸನ್ಮಾನಕ್ಕಿಂತ ಪರಿಸರ ಪ್ರೇಮಿಯ ವಿವಾಹ ಮಹೋತ್ಸವ ಮಾಡೋಣ ಎಂದು ಗ್ರಾಮಸ್ಥರ ಜೊತೆ ಚರ್ಚಿಸಿದ್ದಾರೆ. ಹೀಗಾಗಿ ಇಡೀ ಗ್ರಾಮ ಒಂದಾಗಿ ವಿವಾಹ ಮಹೋತ್ಸವ ನೆರವೇರಿಸಲಾಯಿತು ಎಂದು ಗ್ರಾಮಸ್ಥ ಮಹಾಲಿಂಗ ಹೇಳಿದ್ದಾರೆ.
Advertisement
ಕಾಟಪ್ಪನ ವಿವಾಹಕ್ಕೆ ಇಡೀ ಊರೇ ಒಂದಾಗಿದೆ. ಗ್ರಾಮಸ್ಥರೆಲ್ಲ ಸೇರಿ ಊರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಕಾಟಪ್ಪನ ಜೊತೆ ಇನ್ನೂ ಎರಡು ಬಡ ಜೋಡಿಯ ಮದುವೆಯೂ ನಡೆದಿದೆ. ವಿಶೇಷ ವಿವಾಹ ಮಹೋತ್ಸವಕ್ಕೆ ಚಿತ್ರದುರ್ಗ ಮರುಘಾ ಮಠದ ಶ್ರೀ ಮುರುಘಾ ಶರಣರು ಸಾಕ್ಷಿಯಾಗಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿರುವ ಯೋಧ ಚಂದ್ರಪ್ಪ, ಪ್ರತಿ ಬಾರಿ ರಜೆ ಮೇಲೆ ಊರಿಗೆ ಬಂದಾಗ ಇಂತಹ ಸಮಾಜ ಸೇವೆ ಮಾಡುತ್ತಲೇ ಇರುತ್ತಾರೆ.
Advertisement
ನಾವು ಸೈನಿಕರು ಸ್ವಚ್ಛತೆಗೆ ಒತ್ತು ನೀಡುತ್ತೇವೆ. ಅದಕ್ಕೆ ನಮ್ಮ ಗ್ರಾಮವೂ ಸ್ವಚ್ಛವಾಗಿರಬೇಕೆಂದು ಈ ರೀತಿಯ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಇಡೀ ಗ್ರಾಮದ ಯುವಕರ, ಹಿರಿಯರ ಸಹಕಾರ, ಮಾರ್ಗದರ್ಶನ ಇದೆ ಎಂದು ಸೈನಿಕ ಡಿ.ಚಂದ್ರಪ್ಪ ಹೇಳಿದ್ದಾರೆ.