ಸ್ಪೇಸ್ ಪಾರ್ಕ್ ಸೇರಿ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹ ನೀತಿ – ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಮಾತುಕತೆ

Public TV
2 Min Read
MB Patil And Priyank Kharge 3

ಕೈಗಾರಿಕೆ, ಐಟಿ ಇಲಾಖೆಯ ಯೋಜನೆಗಳ ಕುರಿತು ಚರ್ಚೆ

ಬೆಂಗಳೂರು: ಉದ್ದೇಶಿತ ಬಾಹ್ಯಾಕಾಶ ಪಾರ್ಕ್, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕಾ ಪಾರ್ಕ್ ಮುಂತಾದ ಯೋಜನೆಗಳು ಸೇರಿದಂತೆ ಹಲವು ಮಹತ್ವದ ಉದ್ಯಮಗಳಿಗೆ ಸರ್ಕಾರ ಕೊಡುವ ರಿಯಾಯಿತಿಗಳ ಕುರಿತು ನೀತಿಯನ್ನು ರೂಪಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಕೈಗಾರಿಕಾ ಮತ್ತು ಐಟಿ-ಬಿಟಿ (IT-BT) ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವಿಸ್ತೃತ ಹೂಡಿಕೆ-ಪ್ರೋತ್ಸಾಹ ನೀತಿಗೆ ಸಂಬಂಧಿಸಿದ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇದಾದ ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ವಿಸ್ತೃತವಾಗಿ ಚರ್ಚಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತೀರ್ಮಾನಿಸಿದ್ದಾರೆ.

MB Patil And Priyank Kharge

ಎರಡೂ ಇಲಾಖೆಗಳು ಜೊತೆಗೂಡಿ ಜಾರಿಗೊಳಿಸಬೇಕಾದ ಹಲವು ಯೋಜನೆಗಳು ಮತ್ತು ರೂಪಿಸಬೇಕಾದ ಉಪಕ್ರಮಗಳ ಕುರಿತು ಇಬ್ಬರೂ ಸಚಿವರು ಬುಧವಾರ (ಜು.30) ಇಲ್ಲಿನ ಖನಿಜ ಭವನದಲ್ಲಿ ಮಹತ್ತ್ವದ ಸಭೆ ನಡೆಸಿದರು.ಇದನ್ನೂ ಓದಿ: ರಾಜ್ಯದಲ್ಲಿ ದೀಪಾವಳಿ ಧಮಾಕ, ಕಾಂಗ್ರೆಸ್‌ನಲ್ಲಿ ಕ್ರಾಂತಿ : ವಿಜಯೇಂದ್ರ

ಐಟಿ ಇಲಾಖೆಯು ಇಎಸ್‌ಡಿಎಂ ವಲಯಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹ ಕ್ರಮಗಳ ನೀತಿಯನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಕೈಗಾರಿಕಾ ಇಲಾಖೆ ಕೂಡ ವಿದ್ಯುನ್ಮಾನ ತಯಾರಿಕೆ ವಲಯದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯವಿದೆ. ಕೆಲವೆಡೆ ಒಂದೇ ಯೋಜನೆಗೆ ಐಟಿ ಮತ್ತು ಕೈಗಾರಿಕೆ ಇಲಾಖೆಗಳೆರಡೂ ರಿಯಾಯಿತಿಗಳನ್ನು ಕೊಡುತ್ತಿದ್ದು, ಇದನ್ನು ಸರಿ ಮಾಡಬೇಕಾಗಿದೆ ಎನ್ನುವ ಅಭಿಪಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ನಮ್ಮಲ್ಲಿ ತಯಾರಾಗುತ್ತಿರುವ ಸ್ಮಾರ್ಟ್ಫೋನ್‌ಗಳಲ್ಲಿ ಶೇ.44ರಷ್ಟು ಅಮೆರಿಕಕ್ಕೆ ರಫ್ತಾಗುತ್ತಿದೆ. ಇದರಲ್ಲಿ ಮೊದಲು ಶೇ.61ರಷ್ಟು ಪಾಲು ಹೊಂದಿದ್ದ ಚೀನಾದ ಪ್ರಮಾಣ ಈಗ ಶೇ.25ಕ್ಕೆ ಕುಸಿದಿದೆ. ಆದರೆ, ವಿಯೆಟ್ನಾಂನ ಪಾಲು ಮಾತ್ರ ಶೇ.50ರಷ್ಟಿದೆ. ಈ ಸ್ಪರ್ಧೆಯನ್ನು ಪರಿಗಣಿಸಿ ಬಂಡವಾಳವನ್ನು ಸೆಳೆಯಬೇಕಾಗಿದೆ. ಜೊತೆಗೆ ಸ್ಮಾರ್ಟ್ಫೋನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ಹಲವು ರಿಯಾಯಿತಿಗಳನ್ನು ಘೋಷಿಸಬೇಕಾಗಿದೆ ಎಂದು ಇಬ್ಬರೂ ಸಚಿವರು ಅಭಿಪ್ರಾಯಪಟ್ಟರು.

MB Patil And Priyank Kharge 2

ಸ್ಪೇಸ್ ಪಾರ್ಕ್, ಪಿಸಿಬಿ ಪಾರ್ಕ್‌ಗೆ ಭೂಮಿ:
ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ತಮ್ಮ ಇಲಾಖೆಯು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ-2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಪಾರ್ಕ್, ಕ್ವಿನ್ ಸಿಟಿ / ಅಡಕನಹಳ್ಳಿ ಮತ್ತು ಕೋಚನಹಳ್ಳಿ ಎರಡೂ ಕಡೆಗಳಲ್ಲಿ ತಲಾ 100 ಎಕರೆಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ, ಅಡಕನಹಳ್ಳಿ/ ಕೋಚನಹಳ್ಳಿಯಲ್ಲಿ 100 ಎಕರೆಯಲ್ಲಿ ಕಿಯೋನಿಕ್ಸ್ ಪ್ಲಗ್ & ಪ್ಲೇ ಸೌಲಭ್ಯ ಕೇಂದ್ರದ ಅಭಿವೃದ್ಧಿ ಮೂಲಕ ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕಾಗಿ ಈ ಸ್ಥಳಗಳಲ್ಲಿ ಜಮೀನನ್ನು ಮಂಜೂರು ಮಾಡುವಂತೆ ಈ ಸಂದರ್ಭದಲ್ಲಿ ಪಾಟೀಲ್ ಅವರಲ್ಲಿ ಕೋರಿದರು.

ಡ್ರೋನ್ ಪರೀಕ್ಷಾ ಕೇಂದ್ರವು ನಿರ್ಜನ ಪ್ರದೇಶದಲ್ಲಿ ಇರಬೇಕು ಎನ್ನುವ ನಿಯಮವಿದೆ. ಆದ್ದರಿಂದ ಬೆಂಗಳೂರಿನ ಭಾಗವೇ ಆಗಿರುವ ಹೆಸರಘಟ್ಟದಲ್ಲಿ ಈ ಯೋಜನೆ ಬರುವುದು ಕಷ್ಟವಾಗಬಹುದು. ಆದ್ದರಿಂದ ಇದಕ್ಕೆ ಸೂಕ್ತ ಜಾಗ ಹುಡುಕುವುದು ಒಳ್ಳೆಯದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

MB Patil And Priyank Kharge 1

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್, ಐಟಿ ಇಲಾಖೆ ನಿರ್ದೇಶಕ ರಾಹುಲ್ ಸಂಕನೂರು ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.ಇದನ್ನೂ ಓದಿ: ನನ್ನ ಹೆಸರಿನ ನಕಲಿ ಅಕೌಂಟ್‌ನಿಂದ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಎಸ್.ನಾರಾಯಣ್

Share This Article