ಮಂಗಳೂರು: ಕಾಡಿನ ಮಧ್ಯೆ ಪಾಳುಬಿದ್ದು ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ದೇವಸ್ಥಾನವೊಂದರ ಉತ್ಖನನದ ವೇಳೆ ವಿಶಿಷ್ಟ ದೇವರ ಮೂರ್ತಿಗಳು ಪತ್ತೆಯಾಗಿದ್ದು ಜನರಲ್ಲಿ ಅಚ್ಚರಿ ಸೃಷ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮಾಡತ್ತಾರುವಿನಲ್ಲಿ ನಡೆದ ಉತ್ಖನನದ ವೇಳೆ ಹಲವು ಮೂರ್ತಿಗಳು ಸಿಕ್ಕಿವೆ. ಮಾಡತ್ತಾರು ಆಸುಪಾಸಿನ ಊರುಗಳಲ್ಲಿ ಇತ್ತೀಚಿಗೆ ಅನಾರೋಗ್ಯ ಹಾಗೂ ಅಕಾಲಿಕ ಸಾವುಗಳು ಸಂಭವಿಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೇ ವೇಳೆ, 13ರಷ್ಟು ನಾಗರ ಹಾವುಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅಷ್ಟಮಂಗಳ ಪ್ರಶ್ನೆಯಿಟ್ಟು, ಜ್ಯೋತಿಷಿಗಳ ಸಲಹೆಯನ್ನು ಪಾಲಿಸಿದಾಗ ಕಾಡಿನ ಮಧ್ಯೆ ಪಾಳುಬಿದ್ದ ದೇವಸ್ಥಾನವೊಂದು ಪತ್ತೆಯಾಗಿದೆ. ಹಾಗೆಯೇ ಪಕ್ಕದ ಊರು ಅತ್ತಜಾಲು ಗ್ರಾಮದಲ್ಲಿ ದೈವದ ಭಂಡಾರದ ಮನೆಯೂ ಪಾಳುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.
ಈ ಎರಡು ಜಾಗದಲ್ಲಿ ಉತ್ಖನನ ನಡೆಸಿದಾಗ ಹಲವಾರು ಕಂಚು ಮತ್ತು ಪಂಚಲೋಹದ ದೇವರ ವಿಗ್ರಹಗಳು ಪತ್ತೆಯಾಗಿವೆ. ಇದಲ್ಲದೆ, ದೈವದ ಶಾಪದಿಂದಾಗಿ ಅಲ್ಲಿ ನೆಲೆಸಿದ್ದ ಕುಟುಂಬವೂ ಗತಿ ಗೋತ್ರವಿಲ್ಲದೆ ನಾಶವಾಗಿ ಹೋಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಜಾಗದಲ್ಲಿ ಪ್ರತಿ ಬಾರಿ ಮಣ್ಣು ಅಗೆದಾಗಲೂ ದೇವರ ಮೂರ್ತಿ ಮತ್ತು ಇನ್ನಿತರ ಪರಿಕರಗಳು ಗೋಚರವಾಗಿದ್ದು ಅಲ್ಲಿದ್ದ ಜನರನ್ನು ಅಚ್ಚರಿಗಳಿಸಿದೆ. ಹೀಗಾಗಿ ಅಲ್ಲಿನ ದೇವಸ್ಥಾನ ಹಾಗೂ ನಡೆಯುತ್ತಿರುವ ವಿಲಕ್ಷಣ ಘಟನೆಗಳು ಸಾರ್ವಜನಿಕರಲ್ಲಿ ಆತಂಕದ ಜೊತೆಗೆ ಅಚ್ಚರಿ, ಕುತೂಹಲಕ್ಕೆ ಕಾರಣವಾಗಿದೆ.