ಚಿಕ್ಕಮಗಳೂರು: ಕಾಫಿಯ ಸುವಾಸನೆಯಲ್ಲೇ ಕಳೆದೋಗಿದ್ದ ಮಲೆನಾಡಿಗರು ವಿವಿಧ ಹೂಗಳ ಸುವಾಸನೆಯಲ್ಲಿ ಮುಳುಗಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರನ್ನ ಕೈಬೀಸಿ ಕರೆಯುತ್ತಿದೆ.
ಮೂರು ದಿನಗಳ ಕಾಲ ವಿವಿಧ ಜಾತಿ ಹಾಗೂ ಬಣ್ಣದ ಹೂಗಳನ್ನು ಒಂದೆಡೆ ಸೇರಿಸಿ ಪ್ರದರ್ಶನಕ್ಕಿಟ್ಟಿರೋದು ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿದ್ದು, ಕಣ್ಮನ ಸೆಳೆಯೋ ಹೂಗಳ ರಾಶಿ, ಮೈಮರೆಸೋ ಸುವಾಸನೆ ನೋಡುಗರ ಮನ ಸೂರೆಗೊಳಿಸುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹೂಗಳ ಚಿತ್ತಾರ. ತರಕಾರಿಗಳಿಂದ್ಲೇ ಮೂಡಿರುವ ಸುಂದರ ಕಲಾಕೃತಿ. ಗುಲಾಬಿ, ಲಿಲ್ಲಿ, ಸೇವಂತಿಯಿಂದಲೇ ಶೃಂಗಾರಗೊಂಡಿರುವ ಬೆಡಗಿ ನಾಟ್ಯ ಮಯೂರಿ, ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣ ದೇವಿರಮ್ಮ ಬೆಟ್ಟ, ಬಿಂಡಿಗ ದೇವೀರಮ್ಮ, ಸಂಗೀತದ ಪರಿಕರಗಳು ಹಾಗೂ ತರಕಾರಿ ಹಣ್ಣುಗಳಲ್ಲಿ ಮೂಡಿರುವ ಸುಂದರ ಕಲಾಕೃತಿಗಳು ನೋಡುಗರಿಗೆ ಮತ್ತಷ್ಟು ಖುಷಿ ತಂದಿದೆ.
Advertisement
Advertisement
ಈ ಬಾರಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವತಿಯಿಂದ ವಿಶೇಷವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಧುನಿಕ ಕೃಷಿಯ ಬಗ್ಗೆ ರೈತರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ತರಕಾರಿಗಳಿಂದ ತಯಾರಾಗಿರೋ ಈಶ್ವರನ ದೇವಾಲಯ ಎಲ್ಲರ ಗಮನ ಸೆಳೆಯಿತು. ಈ ಬಾರಿ ಲಿಲ್ಲಿ, ಗುಲಾಬಿ, ಸೇವಂತಿ, ಆಂಥೋರಿಯಂ, ಆಸ್ಟ್ರೋ, ಪಿಟೋನೊಯಾ, ದೈನಥನ್, ಜೀನಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶಿಯ ಪುಷ್ಪಗಳು ಪುಷ್ಪಪ್ರಿಯರನ್ನ ಮಂತ್ರಮುಗ್ಧರನ್ನಾಗಿಸಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ವಿದ್ಯಾರ್ಥಿಗಳು, ಮಹಿಳೆಯರು, ಸಣ್ಣಮಕ್ಕಳು ಸೇರಿದಂತೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪುಷ್ಪ ಪ್ರೀಯರು ಹೂಗಳ ಅಂದಕಂಡು ಪುಳಕಿತರಾಗೋದಲ್ಲದೆ ಫ್ರೆಂಡ್ಸ್ ಜೊತೆ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಪೂಜಿತಾ ಹೇಳಿದ್ದಾರೆ.
Advertisement
Advertisement
30ಕ್ಕೂ ಅಧಿಕ ಬಗೆಯ ಸ್ಟಾಲ್‍ಗಳಲ್ಲಿನ ಸುಂದರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದಿದೆ. ತರಕಾರಿಯಲ್ಲಿ ಅರಳಿರೋ ಕಲಾಕೃತಿ ಅತ್ಯದ್ಭುತವಾಗಿತ್ತು. ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ಹೋಗಿ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದ ಚಿಕ್ಕಮಗಳೂರಿಗರಿಗೆ ಇದೀಗ ತಮ್ಮೂರಲ್ಲೇ ಬಗೆಬಗೆಯ ಫಲಪುಷ್ಪಗಳ ಜೊತೆ ಬಣ್ಣ ಬಣ್ಣದ ಹೂಗಳ ಪ್ರದರ್ಶನ ನೋಡಿ ಖುಷಿಪಡುತ್ತಿದ್ದಾರೆ. ಜಿಲ್ಲಾದ್ಯಂತ ಎಲ್ಲಾ ಊರುಗಳಿಂದಲೂ ಬಂದು ಈ ಸೌಂದರ್ಯವನ್ನ ನೋಡಿ ಖುಷಿ ಪಡುತ್ತಿದ್ದಾರೆ.