-ಇನ್ನೆರೆಡು ದಿನದಲ್ಲಿ ಪ್ರವಾಸಿಗರು ಸ್ವಸ್ಥಾನಕ್ಕೆ ಮರಳಲಿದ್ದಾರೆ ಎಂದ ಕೇಂದ್ರ ಸಚಿವ
ಹುಬ್ಬಳ್ಳಿ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆ ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದರು.
ದೆಹಲಿಯಲ್ಲಿ (Delhi) ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾತ್ರಿಯಿಂದಲೇ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕನ್ನಡಿಗರೆಲ್ಲರನ್ನೂ ಅವರ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ
ಕನ್ನಡಿಗರು ಸ್ವಸ್ಥಾನಕ್ಕೆ ಮರಳಲು ವ್ಯವಸ್ಥೆ:
ಮಂಗಳವಾರ ರಾತ್ರಿಯೇ ರಾಮ್ ಮೋಹನ್ ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ವಿಮಾನ ವ್ಯವಸ್ಥೆ ಸಹ ಮಾಡಲಾಗಿದೆ. ಸದ್ಯಕ್ಕೆ ಮುಂಬೈ ಮತ್ತು ದೆಹಲಿಗೆ ಪ್ರವಾಸಿಗರನ್ನು ರವಾನಿಸಲು ಸರ್ಕಾರ ವಿಮಾನ ವ್ಯವಸ್ಥೆ ಮಾಡಿದೆ. ಇನ್ನೆರೆಡು ದಿನಗಳಲ್ಲಿ ಎಲ್ಲ ಪ್ರವಾಸಿಗರನ್ನೂ ಅವರವರ ಸ್ವಸ್ಥಾನಗಳಿಗೆ ಸುರಕ್ಷಿತವಾಗಿ ಮರಳಿಸಲಾಗುತ್ತದೆ ಎಂದು ತಿಳಿಸಿದರು.
ಮೂವರು ಕನ್ನಡಿಗರ ಪಾರ್ಥಿವ ಶರೀರ ಸಾಗಿಸಲು ಕ್ರಮ:
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಮೃತರ ಪಾರ್ಥಿವ ಶರೀರ, ಗಾಯಾಳುಗಳು, ಕುಟುಂಬಸ್ಥರು ಹಾಗೂ ಪ್ರವಾಸಿಗರನ್ನು ಸ್ವಂತ ಊರು-ಮನೆಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ವಿಮಾನ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ಕರ್ನಾಟಕದ ಅನೇಕರು ಪಹಲ್ಗಾಮ್ ಪ್ರವಾಸಿ ತಾಣದಲ್ಲಿದ್ದು, ರಾಜ್ಯಕ್ಕೆ ಮರಳಲು ಬಯಸಿದ್ದರಿಂದ ಅವರೆಲ್ಲರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಗ್ರಾಹಕ ವ್ಯವಹಾರಗಳ ಸಚಿವನಾಗಿ ವಿಮಾನಯಾನ ಕಂಪನಿಗಳು ಹೆಚ್ಚಿನ ಟಿಕೆಟ್ ದರ ಕಲ್ಪಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ
ಜಮ್ಮು-ಕಾಶ್ಮೀರದ ಶಾಂತಿ ಕೆಡಿಸಲು ಷಡ್ಯಂತ್ರ:
ಜಮ್ಮು-ಕಾಶ್ಮೀರ ಭಾರತದ ಮುಕುಟದಂತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಬಹು ದೊಡ್ಡ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದೆ. ಸ್ವಿಡ್ಜರ್‌ಲ್ಯಾಂಡ್‌ಗಿಂತಲೂ ಸುಂದರವಾಗಿದೆ ಎಂಬ ಭಾವನೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದರು. ಇದನ್ನು ಸಹಿಸದೇ ಅಲ್ಲಿ ಅಶಾಂತಿ ಸೃಷ್ಟಿಸಿ, ಪ್ರವಾಸೋದ್ಯಕ್ಕೆ ಪೆಟ್ಟು ನೀಡಲು ಭಯೋತ್ಪಾದಕ ಚಟುವಟಿಕೆ ನಡೆಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಐದಾರು ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಅಭೂತಪೂರ್ವವಾಗಿ ಬೆಳೆದಿದೆ. ಇಲ್ಲಿನವರಿಗೆ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಬಂದಿದೆ. ಅಲ್ಲದೇ, ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಹ ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದಿವೆ. ಜೊತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸೇರಿ ಎಲ್ಲವೂ ಭಯೋತ್ಪಾದಕರ ಕಣ್ಣು ಕುಕ್ಕಿವೆ. ಅದರ ಪರಿಣಾಮವೇ ಭಯೋತ್ಪಾದನಾ ಕೃತ್ಯ ಎಂದು ಹೇಳಿದರು.
ಭಯೋತ್ಪಾದನೆ ನಿಗ್ರಹಕ್ಕೆ ಇನ್ನಷ್ಟು ಕಠಿಣ ಕ್ರಮ:
ಕಣಿವೆ ರಾಜ್ಯ ಸೇರಿದಂತೆ ದೇಶದ ಎಲ್ಲೆಡೆಯೂ ಭಯೋತ್ಪಾದನೆ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಆದ್ದರಿಂದಲೇ ದೇಶದಲ್ಲಿ 2019ರಿಂದ ಈಚೆಗೆ ಭಯೋತ್ಪಾದಕ ಚಟುವಟಿಕೆ ಇಲ್ಲವಾಗಿತ್ತು. ಪಹಲ್ಗಾಮ್ ಭಯೋತ್ಪಾದಕರ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಇದರ ವಿರುದ್ಧ ಹೋರಾಡಲಿದೆ. ಭಾರತವನ್ನು ಶೂನ್ಯ ಭಯೋತ್ಪಾದನೆಯತ್ತ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ