ಕೋಲಾರ: ನಾಲ್ಕು ಯುಗಗಳಲ್ಲಿ ತನ್ನ ಪವಾಡಗಳಿಂದ ಪ್ರಸಿದ್ಧಿಯಾಗಿರುವ ಸಾಲಿಗ್ರಾಮ ಶಿಲಾ ಗಣಪ ಗ್ರಹಣ ಹಾಗೂ ಧನುರ್ಮಾಸ ಅಂಗವಾಗಿ ಇಂದು ಬೆಣ್ಣೆಯಲ್ಲಿ ಅದ್ದೂರಿಯಾಗಿ ಅಲಂಕಾರಗೊಂಡು ಭಕ್ತರ ಕಣ್ಮನ ತಣಿಸಿದ್ದಾನೆ. ಬರೋಬ್ಬರಿ 150 ಕೆಜಿ ಬೆಣ್ಣೆ ಹಾಗೂ 3,500 ತೆಂಗಿನಕಾಯಿಯಿಂದ ಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ದ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ 14 ಅಡಿ ಏಕಶಿಲಾ ಸಾಲಿಗ್ರಾಮ ಗಣಪನ ವಿಭಿನ್ನ ಅಲಂಕಾರವನ್ನು ಭಕ್ತ ಸಮೂಹ ಕಣ್ತುಂಬಿಕೊಂಡಿತು. ಬೆಣ್ಣೆ ಹಾಗೂ ಒಣಗಿದ ತೆಂಗಿನಕಾಯಿಯಿಂದ ಗರ್ಭಗುಡಿ ಕಂಗೊಳಿಸಿದ್ದು, ಎಲ್ಲರ ಗಮನ ಸೆಳೆಯಿತು. ಮುಜರಾಯಿ ಇಲಾಖೆಗೆ ಸೇರಿರೋ ಕುರುಡುಮಲೆ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಹಾಗೂ ಗ್ರಹಣ ಅಂಗವಾಗಿ ಕೇತುಗ್ರಹಕ್ಕೆ ಅಧಿಪತಿಯಾದ ಗಣಪತಿಗೆ ಕಳೆದ 23 ವರ್ಷಗಳಿಂದ ಬೆಣ್ಣೆ ಅಲಂಕಾರ ಮಾಡಿಕೊಂಡ ಬರಲಾಗಿದೆ.
ವಿಶ್ವದ ಏಕೈಕ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲೆಯ ಗಣೇಶನಿಗೆ ಬೆಣ್ಣೆಯ ಅಲಂಕಾರ ಮಾಡಿ, ದೇವರೆದುರು ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವರ ಕಷ್ಟಗಳು ಬೆಣ್ಣೆಯಂತೆ ಕರಗುತ್ತದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಅದಕ್ಕಾಗಿಯೇ ಪ್ರತಿವರ್ಷ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. 14 ಅಡಿಯ ಈ ಬೃಹತ್ ಸಾಲಿಗ್ರಾಮ ಶಿಲಾ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲು 150 ಕೆಜಿ ಬೆಣ್ಣೆ ಬಳಸಿಕೊಂಡು, 10 ಪುರೋಹಿತರು ಶ್ರಮ ವಹಿಸಿ ಅಲಂಕಾರ ಮಾಡಿದ್ದಾರೆ. ಈ ವರ್ಷ ಗಣೇಶನಿಗೆ ಬೆಣ್ಣೆ ಅಲಂಕಾರದ ಜೊತೆಗೆ ವಿಶೇಷವಾಗಿ ದೇವಾಲಯದ ಗರ್ಭಗುಡಿಗೆ 3,500 ಒಣಗಿದ ತೆಂಗಿನ ಕಾಯಿಯಿಂದ ಅಲಂಕಾರ ಮಾಡಲಾಗಿದೆ.
ಕುರುಡುಮಲೆ ದೇವಸ್ಥಾನಕ್ಕೆ ದೊಡ್ಡ ಇತಿಹಾಸವಿದೆ. ತ್ರಿಪುರಾಸುರ ಎಂಬ ರಾಕ್ಷಸನ ಸಂಹಾರಕ್ಕಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಿ ಈ 14 ಅಡಿಯ ಏಕಶಿಲಾ ಸಾಲಿಗ್ರಾಮ ಶಿಲಾ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಅದಕ್ಕಾಗಿಯೇ ಈ ಸ್ಥಳಕ್ಕೆ ಕುರುಡುಮಲೆ ಎಂದು ಹೆಸರು ಬಂತು ಅನ್ನೋದು ಪ್ರತೀತಿ. ಈ ಗಣಪ ನಾಲ್ಕು ಯುಗಗಳಲ್ಲಿ ಅಂದರೆ ಕೃತಯಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗದಲ್ಲೂ ಪೂಜೆ ಮಾಡಲಾಗುತ್ತಿದೆ.
ಹೀಗಾಗಿ ಈ ಶಕ್ತಿಶಾಲಿ ಗಣಪನಲ್ಲಿಗೆ ಈಗಲೂ ಲಕ್ಷಾಂತರ ಜನರು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು, ವ್ಯಾಪಾರಸ್ಥರು ಯಾರೇ ಆಗಲೀ, ಏನೇ ಕೆಲಸ ಆರಂಭಿಸುವ ಮೊದಲು ಈ ಗಣೇಶನಿಗೆ ಪೂಜೆ ಸಲ್ಲಿಸೋದು ಪ್ರತೀತಿ. ಈ ವಿಶೇಷ ದಿನದಂದು ಬೆಣ್ಣೆ ಅಲಂಕಾರದಲ್ಲಿ ಗಣೇಶನನ್ನು ನೋಡಿದ ಭಕ್ತರಂತೂ ಭಕ್ತಿ ಸಾಗರದಲ್ಲಿ ತೇಲಿ ಹೋಗಿದ್ದಾರೆ.