ನವದೆಹಲಿ: ನೂತನ ಸಂಸತ್ ಭವನ (New Parliament Building) ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು (Rs.75 Coin) ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿಸಿದೆ.
Advertisement
Advertisement
ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ತಿನ ಸಂಕೀರ್ಣದ ಚಿತ್ರವನ್ನು ಹೊಂದಿರಲಿದೆ. ‘ಸಂಸದ್ ಸಂಕುಲ್’ ಎಂದು ಅದರ ಮೇಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಹಾಗೂ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಇಂಗ್ಲಿಷ್‌ನಲ್ಲಿ ಅದರ ಕೆಳ ಭಾಗದಲ್ಲಿ ಬರೆಯಲಾಗುತ್ತದೆ.
Advertisement
Advertisement
ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿರಲಿದೆ. ಅದರ ಅಂಚುಗಳ ಉದ್ದಕ್ಕೂ 200 ಸರಣಿಗಳನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗುತ್ತಿದ್ದು, ಇದು 35 ಗ್ರಾಂ ತೂಗಲಿದೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು
ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ ಇದು 75 ವರ್ಷಗಳ ಸ್ವತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ 20ಕ್ಕೂ ಅಧಿಕ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ, ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಇದನ್ನೂ ಓದಿ: New Parliament Building ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಜೋರು – ವಿಪಕ್ಷಗಳ ಬಹಿಷ್ಕಾರ ಅಸ್ತ್ರಕ್ಕೆ ಪ್ರಧಾನಿ ಮೋದಿ ಕೌಂಟರ್