ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೀಪಕ್ ರಾವ್ ಮತ್ತು ಬಶೀರ್ ಸಾವಿನಿಂದಾಗಿ ಕೆಲ ದಿನಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು ರಾಜಕೀಯ ನಾಯಕರು ಒಂದೊಂದು ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಬಿತ್ತುವ ಪೋಸ್ಟ್ ಗಳು ಹರಿದಾಡುತ್ತಿದೆ. ಈ ಮಧ್ಯೆ ಕುದುರು ಒಂದರಲ್ಲಿ ನಡೆದ ಊರುಸ್ ಕಾರ್ಯಕ್ರಮ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.
ಹೌದು. ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರೋ ಕಣ್ಣೂರಿನಲ್ಲಿ ಇದೇ 6 ಮತ್ತು 7ರಂದು ನೇತ್ರಾವತಿ ನದಿ ಮಧ್ಯೆ ಇರುವ ಕುದುರು `ನಡುಪಳ್ಳಿ’ ಯಲ್ಲಿ ರಹ್ಮಾನಿಯಾ ಮಸೀದಿ ವಠಾರದ ದರ್ಗಾದಲ್ಲಿ ಉರುಸ್ ಉತ್ಸವ ನಡೆದಿತ್ತು. ಈ ಸಂಭ್ರಮದಲ್ಲಿ ಜಾತಿ ಬೇಧವಿಲ್ಲದೇ ಎಲ್ಲಾ ಧರ್ಮದವರೂ ಭಾಗಿಯಾಗಿದ್ದರು. ಅಲ್ಲದೇ ನಡುಪಳ್ಳಿಗೆ ಹೋಗಲು ಸೇತುವೆಯಿಲ್ಲದೇ ಇರುವುದರಿಂದ ಉತ್ಸವಕ್ಕೆ ಬರುವ ಸಾವಿರಾರು ಮಂದಿ ಭಕ್ತರಿಗೆ ಅಡ್ಯಾರ್-ಕಣ್ಣೂರ್ ನಡುಪಳ್ಳಿಯ ಮಧ್ಯೆ ತಾತ್ಕಾಲಿಕವಾಗಿ ದೋಣಿ ಸೇತುವೆ ನಿರ್ಮಾಣ ಮಾಡಲಾಗಿತ್ತು.
ದೋಣಿ ಸೇತುವೆಯ ವಿಶೇಷತೆ ಏನು?
ನದಿ ಬದಿಯಲ್ಲಿ ಮರಳುಗಾರಿಕೆ ನಡೆಸುವ ದಕ್ಕೆಯಲ್ಲಿ ಕೆಲಸ ಮಾಡುವ ಮಂದಿ ಒಟ್ಟಾಗಿ ತಮ್ಮ ದೋಣಿಗಳನ್ನೇ ಸಾಲಾಗಿ ನಿಲ್ಲಿಸಿ ಅದರ ಮೇಲೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದರು. ಶನಿವಾರ ಉತ್ಸವ ಆಯೋಜನೆಗೊಂಡಿದ್ದರಿಂದ ಶುಕ್ರವಾರವೇ ಸೇತುವೆ ನಿರ್ಮಾಣ ಕೆಲಸ ಶುರುವಾಗಿತ್ತು. ಸಂಜೆ ವೇಳೆಗೆ ಒಂದೇ ರೀತಿಯಾಗಿ 67 ದೋಣಿಗಳನ್ನು ಜೋಡಿಸಿ, ಅದರದ ಮೇಲೆ ಕಬ್ಬಿಣದ ಹಲಗೆಯನ್ನು ಇಡಲಾಗಿತ್ತು. ಇದರ ಮೇಲೆ ಕೆಂಪು ಹಾಸು ಹಾಸಿ, ಲೈಟ್ ಕಟ್ಟುವ ಮೂಲಕ ಭಕ್ತರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ವಿಶೇಷ ಏನೆಂದರೆ ಹಿಂದೂಗಳು ದೋಣಿಗಳು ಇದರಲ್ಲಿ ಇದ್ದು, ಸ್ವ-ಇಚ್ಛೆಯಿಂದ ದೋಣಿಯನ್ನು ತಂದು ನಿಲ್ಲಿಸಿದ್ದರು. ಈ ದರ್ಗಾ ಬಹಳ ಪುರಾತನವಾಗಿದ್ದು, 1923ರಲ್ಲಿ ಬೃಹತ್ ನೆರೆ ಬಂದು ಕೊಚ್ಚಿಹೋಗಿತ್ತು.
ದೋಣಿ ಸೇತುವೆಯೇ ಯಾಕೆ?
ಇನ್ನು ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಸೀದಿಯ ಮದರಸ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್, ಈ ಮೊದಲು ಭಕ್ತರನ್ನು ನಡುಪಳ್ಳಿಗೆ ದೋಣಿ ಮೂಲಕ ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಆದ್ರೆ ದೋಣಿಯಲ್ಲಿ ಜನರ ಹೊಯ್ದಾಟದಿಂದ ಆತಂಕ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ತಾತ್ಕಾಲಿಕ ಸೇತುವೆಯ ನಿರ್ಮಿಸಲಾಗುತ್ತಿದೆ. ಇನ್ನು ಇದರಲ್ಲಿ ಹಿಂದೂಗಳ ಅನೇಕ ದೋಣಿಗಳಿವೆ. ಅವರೆಲ್ಲರೂ ಸ್ವ-ಇಚ್ಛೆಯಿಂದ ದೋಣಿ ತಂದು ನಿಲ್ಲಿಸುತ್ತಾರೆ ಎಂದು ಹೇಳಿದರು.
ಈ ಸೌಹಾರ್ದದ ಕುರಿತು ಮೂರು ವರ್ಷವೂ ತಮ್ಮ ದೋಣಿಗಳನ್ನು ಸೇತುವೆಗೆಂದು ನಿಲ್ಲಿಸುವ ಜಯಶೀಲ ಅಡ್ಯಂತಾಯ ಎಂಬವರು ಮಾತನಾಡಿ, “ಕರಾವಳಿಯಲ್ಲಿ ರಾಜಕೀಯ ಪ್ರೇರಿತವಾಗಿ ಯಾವುದೇ ಘಟನೆಗಳು ನಡೆಯಲಿ. ನಮ್ಮೂರಿನ ಸೌಹಾರ್ದಕ್ಕೆ ಯಾವುದೇ ಧಕ್ಕೆಯಾಗದಂತೆ ನಾವು ನಡೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. ಉರುಸ್ ಮುಗಿದ ಬಳಿಕ ಅಂದ್ರೆ ಸೋಮವಾರ ಮುಂಜಾನೆ ದೋಣಿಗಳೆಲ್ಲ ತಮ್ಮ ಕಾರ್ಯದಲ್ಲಿ ತೊಡಗಿಕೊಂಡವು.