ಹಾಯ್ ಅತ್ತೆ ಮಗನೇ
ನೀನವತ್ತು ರಜೆಯ ಮೇಲೆ ಮನೆಗೆ ಬಂದವನು ಇನ್ನೂ ಮಲಗಿಯೇ ಇದ್ದೇ. ನಿನ್ನ ತುಂಬಾ ಹತ್ತಿರದಿಂದ ನೋಡೋಕೆ ಅದೊಂದೇ ಅವಕಾಶ ಇದ್ದಿದ್ದು ನನಗೆ. ಕಾಫಿ ಮಾಡ್ಕೊಂಡು ನಿನ್ನ ರೂಮಿಗೆ ಬಂದವಳೇ ಬಾವ ಅಂತ ಎರಡು ಸಲ ಕರೆದೆ, ನೀನು ಕಣ್ಣೇ ಬಿಡಲಿಲ್ಲ. ಆಗ ನನಗೆ ಕಂಡಿದ್ದು ನಿನ್ನ ಕೆನ್ನೆ, ಇದೇ ಅವಕಾಶ ಅಂತ ಒಂದು ಮುತ್ತು ಕೊಟ್ಬಿಟ್ಟೆ. ನಿನಗಂತೂ ಈ ಥರ ಧೈರ್ಯ ಯಾವಾಗ ಬರುತ್ತೋ? ಅಂತ ಯೋಚಿಸೋದ್ರೊಳಗೆ ನನ್ನ ತಂಪು ತುಟಿಗಳು ತಾಕಿ ನಿನ್ನ ನಿದ್ರೆ ಹಾರಿ ಹೋಗಿತ್ತು. ಸಣ್ಣಗೆ ಕಣ್ಬಿಟ್ಟು ಅಮ್ಮು, ಅಂದೆ ನೀನು. ಬಾವ ಕಾಫಿ ತಗೊಳಿ ಅಂತ ಮೊದಲೇ ನನ್ನ ತುಟಿಯಲ್ಲಿ ಹೀರಿದ್ದ ಆ ಕಪ್‌ನ್ನ ಅಲ್ಲೇ ಇಟ್ಟು ಹೊರಗೆ ಬಂದೆ.
ನೀನೆದ್ದು ಕಾಫಿ ಕುಡಿಯೋದನ್ನೇ ಕದ್ದು ನೋಡಿ, ಆ ಕಪ್‌ನ ಅಂಚನ್ನೇ ನನ್ನ ತುಟಿ ಅಂದ್ಕೊಂಡು ಖುಷಿ ಪಟ್ಟಿದ್ದೆ. ಅದೆಷ್ಟು ಮುದ್ದಾಗಿ ಕಾಫಿ ಹೀರೋದು ನೀನು, ಇನ್ನೇನಾದ್ರೂ ನನ್ನ ತುಟಿಯ ಜೇನೇನಾದ್ರೂ ನಿನ್ನ ಕೈಗೆ ಸಿಕ್ಕರೆ.. ವಾವ್! ತುಂಬಾ ಆಸೆ ಕಣೋ, ನಿನ್ನ ಮೇಲೆ. ಅದೇನೋ ಗೊತ್ತಿಲ್ಲ, ನಿನಗೂ ಹೀಗೆನಾ? ಇದನ್ನೂ ಓದಿ: ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!

ನೀನು ಸ್ನಾನ ಮುಗಿಸಿ ಬಂದಾಗ ಮನೆಯೆಲ್ಲ ಮೈಸೂರು ಮಲ್ಲಿಗೆ ಹೂ ಹರಡಿದಂತೆ ಪರಿಮಳ! ನೀನು ನಮ್ಮ ಮನೆಗೆ ಬಂದ್ರೆ ಎಲ್ಲದ್ರಲ್ಲೂ ಏನೋ ಸಂಭ್ರಮ. ದಿನಾಲೂ ಹಬ್ಬನೇ ಅನ್ನೋ ಫೀಲ್. ನಮ್ಮ ಮನೆ ಅಂತಾನೇ ಅಲ್ಲ, ನೀನು ಇರೋ ಜಾಗಾನೇ ಹಾಗೇ..! ಅದೆಂತ ಬೋರ್ ಆಗೋ ಬರಡು ಜಾಗ ಆದ್ರೂ ಅಲ್ಲೊಂದು ಹೂದೋಟದ ಸಂಭ್ರಮ ಹುಟ್ಟಾಕ್ಬಿಡ್ತಿಯಾ. ಅದೆಂತ ಸ್ವೀಟ್ ಗುಣ ನಿಂದು. ಇನ್ನೂ ನನ್ನ ಬದುಕನ್ನ ನಿನ್ನ ಕೈಗೆ ಒಪ್ಪಿಸಿದ್ರೆ, ಅದೆಷ್ಟು ಚೆಂದ ಅನ್ನಿಸ್ತಿರುತ್ತೆ ದಿನಕ್ಕೆ ನೂರು ಸಲ!
ನಿನ್ನ ಕೈಯಲ್ಲಿ ನಾನು ಹೂವಾಗ್ಬಿಡ್ಬೇಕು. ನೀನು ನನ್ನ ಮುದ್ದಾಡೋ ಚಿಟ್ಟೆ ಥರ ನನ್ನ ಹಿಂದೆ ಇರ್ಬೇಕು. ಇಲ್ಲಿ ನೋಡು ಹೂವೇ ಚಿಟ್ಟೆಯನ್ನ ಬೆನ್ನಟ್ತಿದೆ..! ತುಂಬಾ ಮುಗ್ಧನ ಥರ ನಾಟಕ ಮಾಡ್ಬೇಡ. ನನಗೂ ನೀನು ಕದ್ದು ನೋಡೋದು ಗೊತ್ತು. ಪಿಯುಸಿಯಲ್ಲಿ ಇದ್ದಾಗ್ಲೇ ನನ್ನ ನಿನ್ನ ಹೆಸರು ಸೇರಿಸಿ ಪುಸ್ತಕದಲ್ಲಿ ಬರೆದಿಟ್ಟಿದ್ದು ನೋಡಿದಿನಿ. ನಮ್ಮಿಬ್ಬರ ಹೆಸರು ಹೊತ್ತ ನಿಮ್ಮೂರ ಆಲದ ಮರನೂ ನೋಡಿದ್ದೆ. ಅಣ್ಣ ಅಲ್ಲೇನೋ ಕೆತ್ತಿದಾನೆ ಅಂತ ನಿನ್ನ ತಂಗಿನೇ ತೋರಸಿದ್ಲು. ಮತ್ಯಾಕೆ ಇಷ್ಟೊಂದು ನಾಟಕದ ಸಭ್ಯತೆನೋ ನಿನಗೆ? ಇದನ್ನೂ ಓದಿ: ಒಪ್ತಿದ್ನೋ.. ಬಿಡ್ತಿದ್ನೋ.. ನೀನು ನನಗೆಲ್ಲಾ ಹೇಳ್ಬಿಡ್ಬೇಕಿತ್ತು..!
ಪ್ರೀತಿ ಕರೆಯುವಾಗ ಎಲ್ಲವನ್ನೂ ಬಿಟ್ಬಿಡ್ಬೇಕಂತೆ. ಅದ್ಕೆ ನಾನಂತೂ ನೀನು ಪ್ರತಿ ಸಲ ಡ್ರಾಪ್ ಮಾಡ್ಬೇಕಾದ್ರೆ ನಿನ್ನ ಹಿಂದೆ ಕೂತು ಹಂಪ್ ಬರ್ಲಿ, ತಕ್ಷಣ ಬ್ರೇಕ್ ಹಾಕಲಿ ಅಂತೆಲ್ಲ ಆಸೆ ಪಡ್ತಿರ್ತಿನಿ. ಸಣ್ಣ ಅವಕಾಶ ಸಿಕ್ಕರೂ ನಿನ್ನ ಆಪ್ತತೆಯನ್ನ ಅನುಭವಿಸ್ತೀನಿ. ನಿನ್ನ ಜೊತೆ ಪ್ರತಿ ದಿನ ಹೀಗೆ ಇದ್ರೆ ಅಂತ ಅನ್ನಿಸ್ತಿರುತ್ತೆ. ನಮ್ಮ ಲೈಫ್ ಜರ್ನಿಯಲ್ಲಿ ಬರೋ ಹೊಂಡ, ಗುಂಡಿ, ತಿರುವು ಹೀಗೆ ಎಂಜಾಯ್ ಮಾಡ್ಬಹುದಲ್ವಾ? ಒಲವಿಗಿರೋ ಶಕ್ತಿಯೇ ಅದು ಕಣೋ.
ಹೀಗೆ ನೀನು ನನ್ನ ಹೃದಯ, ಮನಸ್ಸಿನ ಪ್ರತಿ ಮೂಲೆಯಲ್ಲೂ ನಿನ್ನ ಮೇಲಿನ ಆಸೆಯ ಗುರುತನ್ನ ಮೂಡಿಸಿದಿಯ, ಅದನ್ನ ಅಳಿಸಲ್ಲ ಅನ್ನೋ ನಂಬಿಕೆ ತುಂಬಾ ಇದೆ. ಈ ಜಗತ್ತಿಗೆ ನಾವಿಬ್ರೂ ಪ್ರೇಮಿಗಳು ಅಂತ ಗೊತ್ತಾಗ್ಬೇಕು. ಹಾಗೆ ನನ್ನೊಳಗೂ ಒಲವಿನ ಗುರುತು ಮೂಡಿಸು..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ ನಿನ್ನ ಪ್ರೀತಿಯ ಅಮ್ಮು

