ಹಾಯ್ ವಿಭಾ…
ಇಷ್ಟೆಲ್ಲ ಪ್ರೀತಿನ ಮನಸ್ಸಲ್ಲಿ ಇಟ್ಕೊಂಡು.. ನಮ್ ಪ್ರೀತಿ (Love) ಸಕ್ಸಸ್ ಆಗುತ್ತಾ? ಇಲ್ವಾ ಅನ್ನೋ ಅನುಮಾನ ಯಾಕೆ ನಿಂಗೆ? ಎಲ್ಲಾ ಪ್ರೇಮಿಗಳಿಗೂ (Lovers) ಇಂತಹದ್ದೇ ಆತಂಕ ಇದ್ದೆ ಇರತ್ತೆ ಬಿಡು. ಇನ್ನೂ ಟೈಮ್ ಇದೆ, ಅವಸರ ಏನಿಲ್ಲ.. ಆದ್ರೂ ಈ ಭಯ ಅಂದೆ ನೋಡು ನೀನು… ಅದನ್ನ ಮೀರಬೇಕು..! ಯಾಕಂದ್ರೆ ಪ್ರೇಮ ಅನ್ನೋದು ಅಪರಿಮಿತ ದೈರ್ಯ..! ಅದು ಜಗತ್ತಲ್ಲಿ ಏನೇ ಅಡ್ಡ ಬಂದ್ರೂ ಎದುರಿಸ್ತೀವಿ ಅನ್ನೋ ತಾಕತ್ತು! ಹಾಗಿದ್ರೂ ನಾವು ಭಯ ಪಡಬೇಕಿರೋದು ನನ್ನ ಲೆಕ್ಕದಲ್ಲಿ ನಮಗೆ ಮಾತ್ರ… ನಾನಂತೂ ಪ್ರೇಮದ ವಿಚಾರದಲ್ಲಿ ಸ್ವಾರ್ಥಿನೆ. ಆ ಪ್ರೇಮಕ್ಕಾಗಿ ನಾನು ಯಾರಿಗೆ ಬೇಕಾದ್ರೂ ಮೋಸ ಮಾಡೋಕೆ ರೆಡಿ ಇದ್ದೀನಿ.. ಆದ್ರೆ ನಿನಗಾಗ್ಲಿ, ನಮ್ಮ ಪ್ರೇಮಕ್ಕಾಗಲಿ ಮೋಸ ಮಾಡಲ್ಲ.

ನಿನಗೆ ಅನ್ನಿಸಬಹುದು ಇವನಿನ್ನೂ ನನ್ನಷ್ಟು ಪ್ರಾಕ್ಟಿಕಲ್ ಆಗಿಲ್ಲ ಅಂತ.. ಇರಬಹುದು.. ನನಗೆ ಈ ಸಮಾಜದ ಭಯ, ಕುಟುಂಬದ ಭಯ ಖಂಡಿತಾ ಇಲ್ಲ. ನಾನು ನಿನ್ನ ಪ್ರೀತ್ಸಿದಿನಿ… ಅದನ್ನ ನಾನು ಎಲ್ಲರ ಮುಂದೂ ಒಪ್ಕೋತಿನಿ.. ಎಷ್ಟೋ ಜನರಿಗೆ ಪ್ರೇಮದಲ್ಲಿ ಅರಳಿ ನಿಂತ ಬಳಿಕ.. ಅವನು ನನ್ನವನು ಅಥವಾ ನನ್ನವಳು ಅಂತ ಹೇಳ್ಕೊಳ್ಳೋಕೆ… ಎಲ್ಲರಿಗೂ ಕಾಣುವಂತೆ ಜೊತೆಗೆ ಕೂತು ಮಾತಾಡೋಕೆ ಅದ್ಯಾಕೋ ನಾಚಿಕೆನೋ? ಅದ್ಯಾಕೆ ಭಯನೋ ನನಗೆ ಗೊತ್ತಿಲ್ಲ.
ನನಗೆ ಕಾಫಿ ಅಥವಾ ಟೀ ಇಷ್ಟ ಅಂದ ಹಾಗೆ, ನೇರವಾಗಿ ಅವನು, ಅವಳು ಇಷ್ಟ ಅನ್ನೋಕೆ ಯಾಕೆ ಸಾಧ್ಯ ಇಲ್ಲ? ನೀನು ನನ್ನ ಮಗು ಅಂತ ಹೇಳೊಕೆ ಯಾವ ತಾಯಿನೂ ಹಿಂಜರಿಯಲ್ಲ.. ಹಾಗೇ ಆ ಮಗುನೂ ಅಷ್ಟೇ ಸಾವಿರಾರು ಜನರ ಮುಂದೆ ಅಮ್ಮ ಅಂತ ಕರಿಯೋಕೆ ಯಾವುದೇ ಮುಜುಗರಪಡಲ್ಲ.. ಅದೇ ರೀತಿ, ನೀನು ನನ್ನವಳು ಅನ್ನೋಕು ನನಗೆ ಭಯ ಇಲ್ಲ.. ಪ್ರೇಮಕ್ಕೆ ಯಾವ ಮಿತಿಯೂ ಇಲ್ಲ..! ಸಿದ್ಧಾಂತ ಬೋರ್ ಆಯ್ತಾ..? ಆದ್ರೂ ನನ್ನ ಪಾಲಿಗೆ ಇದೇ ಸತ್ಯ ವಿಭಾ..!

ಈಗ ನಿನ್ನ ಲೆಕ್ಕಾಚಾರದ ಬ್ಯಾಂಕ್ (Bank) ಬ್ಯಾಲೆನ್ಸ್ ನನ್ನಲ್ಲಿನೋ.. ಅಥವಾ ನಿನ್ನಲ್ಲಿನೋ ಇಲ್ಲ ಅಂತ ದೂರ ಆದ್ವಿ ಅಂತಿಟ್ಕೋ.. ಮುಂದೆ ಅದೆಲ್ಲ ಬಂದು, ನಾನೊಂದು ತೀರದಲ್ಲಿ ನೀನೊಂದು ತೀರದಲ್ಲಿ ನಿಂತು ಹಿಂದಿರುಗಿ ನೋಡಿದ್ರೆ…. ನಮ್ಮ ಎದೆಯ ಮಗು I Mean ನಮ್ಮ ಪ್ರೇಮ ಅನಾಥವಾಗಿ ಅದ್ಯಾವುದೋ ಮೂಲೆಯಲ್ಲಿ ಬಿಕ್ಕಳಿಸಬಾರದು.. ಅಲ್ವಾ? ಹಾಗೊಂದು ವೇಳೆ ದೂರಾದ್ರೆ ನಮ್ಮ ಮೂರ್ಖತನಕ್ಕೆ ನಾವು ನಗಬೇಕೆ ಹೊರತು, ಬೇಸರ ಪಡಬಾರದು!
ನಾನಂತೂ ಈ ಸಿಟ್ಟು, ದುಡ್ಡು, ಸಂಬಂಧ ಅಂತ ಬಂದಾಗ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀನಿ ವಿಭಾ… ನೆನಪಿದಿಯಾ… ಯಾವುದೋ ವಿಚಾರಕ್ಕೆ ನಿನ್ನ ಕಾಲಿಗೂ ಬೀಳೋಕು ಮುಂದಾಗಿದ್ದೆ… ನನ್ನವಳ ಮುಂದೆ ಇಷ್ಟು ಶರಣಾಗಿಲ್ಲ ಅಂದ್ರೆ ಹೇಗೆ..? ಇಷ್ಟು ಸೋತಾದ್ರೂ ಸಂಬಂಧ ಉಳಿಬೇಕು ಅನ್ನೋದು ನನ್ನ ಆಸೆ.. ಹಾಗಂತ ನಾನು ಅದನ್ನ ಸೋಲು ಅಂತ ಒಪ್ಪಿಕೊಳ್ಳಲ್ಲ..!

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳ್ಬೆಕು ಅಂದ್ರೆ ನನ್ನ ಆಸ್ತಿ, ಅಂತಸ್ತು, ಬ್ಯಾಂಕ್ ಬ್ಯಾಲೆನ್ಸ್, ಗೌರವ ಎಲ್ಲ ನೀನೇ… ನೀನು ಇಲ್ದೇ ಇದ್ಯಾವುದು ಇಲ್ಲ… ಏನೇ ಆದ್ರೂ ನಿನ್ನ ಕೈ ನನ್ನ ಹೆಗಲ ಮೇಲೆ ಇರಬೇಕು… ಆಗಷ್ಟೇ ಆ ಸಾಧನೆಗೆ… ಒಂದು ಗತ್ತು..! ನೀನು ಹೇಳಿದ ಹಾಗೆ ಪತ್ರ ಓದುವಾಗ ನನ್ನ ಧ್ವನಿ ಕೇಳ್ಸುತ್ತೆ ಅಂದ್ಯಲ್ಲ.. ಹಾಗೆ ನಾನು ಏನೇ ಕೆಲಸ ಮಾಡ್ಬೇಕಾದ್ರೂ ನೀನು ಕಾಣ್ತಿಯಾ..! ನಾನು ನಿನ್ನ ಜೊತೆ ಮಾತಾಡ್ತಾನೆ ಕೆಲಸ ಮಾಡೋದು! ಯಾವುದೇ ವಿಚಾರ ಇರಲಿ, ಸ್ಥಳ, ಯಾವ ವಸ್ತು ಇರಲಿ ಅಲ್ಲೆಲ್ಲ ನೀನು ಹಾಜರ್ ಇರ್ತೀಯ..!
ನನಗೆ ಈಗಲೂ ನೀನು ಅದೇ ಕುಟುಂಬ, ಸಮಾಜ, ಹಣ ಅಂತ ದೂರ ಹೋಗ್ತಿಯಾ ಅನ್ನೋ ಭಯ ಇಲ್ಲ.. ನಾನು ನಿನ್ನನ್ನ ಪೂರ್ತಿ ಅರ್ಥ ಮಾಡ್ಕೊಂಡಿದಿನಿ.. ನೀನೇ ಹೇಳ್ತಿಯಲ್ಲ ʻಪ್ರೀತಿ ಅಂದ್ರೆ, ಪ್ರೀತಿ ಅಷ್ಟೇ ಅಂತ.. ಹಾಗೇ ಪ್ರೀತಿಸ್ತಾ ಕಾಲ ಕಳೆಯಬಹುದಲ್ವಾ..? ನಿಜ ವಿಭಾ.. ಹತ್ತಿರದಲ್ಲೇ ಇದ್ದು ಪ್ರೀತಿ ಮಾಡ್ಬೇಕು ಅಂತಾನೂ ಇಲ್ಲ.. ʻಸೂರ್ಯ ಅದೆಷ್ಟು ದೂರ ಇದಾನೆ.. ಭೂಮಿಗೆ ಪ್ರೀತಿಯ ಬೆಳಕು ಚೆಲ್ಲಲ್ವಾ..?ʼ ಅದೇ ರೀತಿ, ಪ್ರೀತಿ ಅನ್ನೋದಷ್ಟೇ ಅಂತಸ್ತು.. ನೀನು.. ನಿನ್ನನ್ನ ಪಡೆಯಲೇ ಬೇಕು ಅನ್ನೋದು ಆಸೆ.. ವ್ಯಾಮೋಹ..!! ಹೀಗೂ ಬದಲಾಗಬಹುದಲ್ವಾ ನಾನು?

ಇದೆಲ್ಲ ನನಗೆ ನಾನೇ ಮಾಡಿಕೊಳ್ಳುವ ಸಮಾಧಾನನಾ? ಅಥವಾ ನಿನ್ನ ಗೊಂದಲಗಳಿಗೆ ನಾನು ಕಂಡುಕೊಂಡ ವಿಚಿತ್ರ ಉತ್ತರನಾ? ಗೊತ್ತಿಲ್ಲ.. ನನಗೂ ಗೊಂದಲವಿದೆ… ನಿನ್ನ ಪ್ರೀತಿಯ ಅಮಲಿನಲ್ಲಿ ತೇಲುವಾಗ ಪುಟಕ್ಕೆ ಇಳಿಸಿದ ಸಾಲುಗಳಿವು…! ಆದರೆ ನಮ್ಮ ಪ್ರೇಮದಲ್ಲಿ ಯಾವ ಗೊಂದಲವೂ ಇಲ್ಲ..!
ನಾವಿಬ್ರೂ ಬದುಕಲ್ಲಿ ಒಂದಾಗ್ತೀವೋ ಇಲ್ವೋ ಆ ಆಲೋಚನೆ ಬೇಡ್ವೇ ಬೇಡ ವಿಭಾ.. ಒಂದಾಗಲಿ.. ಆಗದೇ ಇರಲಿ… ಪ್ರೀತ್ಸೋಣ.. ಇಂದಿಗೂ ದೂರಾದ ರಾಧೆ ಕೃಷ್ಣರನ್ನ (Radha Krishna) ಜಗತ್ತು ಪ್ರೇಮದಿಂದಲೇ (Love) ಗುರುತಿಸುತ್ತಿದೆ!!

