ಅವಳು ಯಾವ ಸಂಗೀತ (Music) ಕ್ಲಾಸ್‌ಗೂ ಹೋದವಳಲ್ಲ…. ಶ್ರೇಯಾ, ಲತಾರಂತ ವಾಯ್ಸ್ ಏನು ಅವಳದ್ದಲ್ಲ.. ಆದ್ರೆ ಇದೆಲ್ಲದನ್ನೂ ಮೀರಿದ ಟಾನಿಕ್ ಅವಳ ಧ್ವನಿಯಲ್ಲಿದೆ! ನಾನವಳ ಹಾಡಿಗೆ ಜೀವಮಾನವಿಡಿ ಫ್ಯಾನ್! ಹೌದು ನಾನು ಅವಳು ಹಾಡುವ ಹಾಡನ್ನು (Song) ಅಷ್ಟು ಇಷ್ಟಪಡ್ತೀನಿ. ಎಷ್ಟಂದ್ರೆ.. ನಾನ್ಯಾವತ್ತೂ ಅವಳ ಸಿಹಿ ಮುತ್ತಿಗೆ ಕಾಡಿದವನಲ್ಲ. ಈ ಮಾತು ಅವಳ ಧ್ವನಿಯಲ್ಲಿ ಕೇಳ ಬಯಸುವ ಆಸೆಗೆ ಮಾತ್ರ ಅನ್ವಯ ಆಗುವುದಿಲ್ಲ..! ಇದರಲ್ಲಿ ಅವಳಿಗೆ ಯಾವ ರಿಯಾಯಿತಿಯನ್ನೂ ಕೊಡದೆ ಆಗಾಗ ಹಾಡಿಸಿ, ಅದನ್ನು ಕೇಳಿ ಸಂಭ್ರಮಿಸುತ್ತಿದ್ದವನು ನಾನು.
ಆ ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಅವಳು ಹೇಳಿದ ʻಆಕಾಶ ದೀಪವೂ ನೀನುʼ (Akasha Deepvu Neenu) ಹಾಡು… ಇಂದಿಗೂ ನನ್ನ ಫೇವರೆಟ್! ಇವತ್ತಿಗೂ ಆ ಹಾಡು ನನ್ನ ಮೊಬೈಲ್‌ನಲ್ಲಿ ಗಂಟೆಗೊಮ್ಮೆ ಆದ್ರೂ ಪ್ಲೇ ಆಗುತ್ತೆ! ಅವಳ ಧ್ವನಿಯಲ್ಲಿ ಆ ಹಾಡು ಕೇಳಿ ಸಂಭ್ರಮಿಸುವುದಿದೆ ನೋಡಿ, ಅದೊಂದು ಮಧುರವಾದ ಅಮಲು ಕೊಡುವ ಅನುಭವ. ಬಹುಶಃ ಎಷ್ಟೋ ಜನ ಇಂತಹ ಅನುಭವವನ್ನೇ ಹುಡುಕಿ ಯಾವ್ಯಾವುದೋ ಅಮಲು ಪದಾರ್ಥಗಳಿಗೆ ಕೈ ಹಾಕುತ್ತಾರೇನೋ? ನನಗೆ ಅಂತಹ ದುಷ್ಟ ಅಮಲಿಂದ ತಪ್ಪಿಸಿದ್ದು ಅವಳ ಧ್ವನಿಯ ದಿವ್ಯ ಅಮಲು! ನಾನು ಸದಾ ಅವಳ ದಿವ್ಯ ಪ್ರೇಮದ ಅಮಲಿಗೆ ಚಿರಋಣಿ ಎಂದು ಎದೆ ಮುಟ್ಟಿಕೊಂಡು ಘೋಷಿಸುತ್ತೇನೆ. ಇದನ್ನೂ ಓದಿ: ಹೃದಯ ಕುಂಡದಲ್ಲಿ ಹೂಗಳ ಜೋಡಿಸುವ ಅವಳ ಮಾತುಗಳು ನಂಗಿಷ್ಟ!
ನನ್ನ ಜೊತೆಯಲ್ಲಿದ್ದಾಗ ಅವಳು ಹಾಡಿದ್ದ ಹಾಡುಗಳು… ನನ್ನನ್ನು ಸದಾ ಕಾಡುತ್ತವೆ.. ಯಾರ ಧ್ವನಿಯಲ್ಲಿ ಆ ಹಾಡುಗಳನ್ನು ಕೇಳಿದರೂ, ಅವಳದೇ ಧ್ವನಿಯಲ್ಲಿ ಕೇಳಿದಂತಾಗುತ್ತದೆ. ಆಗೆಲ್ಲ ಮತ್ತದೇ ಸಂಭ್ರಮದ ಮಳೆ ಸುರಿಯುತ್ತದೆ. ನನ್ನ ಮನಸ್ಸಿನಲ್ಲಿ ಪ್ರೇಮಗೀತೆಗಳ ಪಟ್ಟಿಯಲ್ಲಿ ಅವಳ ʻಆಕಾಶ ದೀಪವೂ ನೀನುʼ ಹಾಡು ಯಾವಾಗಲೂ ಅಗ್ರ ಸ್ಥಾನದಲ್ಲಿರುತ್ತದೆ. ಅಷ್ಟು ಮೋಡಿ ಮಾಡಿದ ಹಾಡು ಅದು. ಬಹುಶಃ ಅವಳ ಧ್ವನಿಯಲ್ಲಿ ನಾನು ಮೊದಲು ಕೇಳಿದ ಹಾಡು ಅದು, ಅದಕ್ಕೆ ಇರಬೇಕು. ಸುರಗಿಯ ಘಮದಂತೆ ಆ ಹಾಡು ಮನಸ್ಸಲ್ಲಿ ಪರಿಮಳ ಕಳೆದುಕೊಳ್ಳದಂತೆ ಹಾಗೇ ಉಳಿದು ಬಿಟ್ಟಿದೆ.
ಈ ʻಆಕಾಶ ದೀಪʼನನ್ನ ಬದುಕಿಗೆ ಶೇಕ್ಸ್‌ಪಿಯರ್ (William Shakespeare) ಹೇಳುವ Sonnet 116ನ ಧೃವತಾರೆ ಇರಬೇಕು? ಎಂದು ಒಮ್ಮೊಮ್ಮೆ ಕಾಡಿದ್ದೂ ಇದೆ. ಪ್ರೇಮದ ದೋಣಿಗೆ ಕಗ್ಗತ್ತಲ್ಲಿ ಸದಾ ದಾರಿ ತೋರಿಸುವ ಆ ಧೃವತಾರೆಯಂತೆ, ಅವಳ ನೆನಪು, ಅವಳ ಹಾಡು, ಅವಳ ನಗು, ಎಲ್ಲೋ ಸಂಭ್ರಮದಲ್ಲಿದ್ದಾಳೆ ಎಂಬ ಆ ಖುಷಿ ನನ್ನ ಬದುಕಿನ ನೌಕೆಗೂ ದಾರಿ ತೋರುವ ಧೃವತಾರೆಯಂತೆ ಬೆಳಗುತ್ತಿರುತ್ತದೆ. ಅದಕ್ಕೆ ಆ ಹಾಡು ಕೇಳಿದಾಗಲೆಲ್ಲ ಅನೇಕ ಸಂಭ್ರಮದ ಬಾಗಿಲುಗಳು ತೆರೆಯುತ್ತವೆ!
ಈ ರೀತಿಯ ಸಂಗೀತದ ಅಮಲು ಮನುಷ್ಯನ ಪ್ರೇಮದಲ್ಲಿ ಮಾತ್ರ ಕಾಡಿದ್ದಲ್ಲ ನೋಡಿ, ರಾಧೆಗೆ ಕೃಷ್ಣನ ಕೊಳಲಿನ ನಾದ, ಪಾರ್ವತಿಗೆ ಶಿವನ ಡಮರುಗದ ಸದ್ದು, ಹಾಗೇ ಚತುರ್ಮುಖನಿಗೆ ಶಾರದೆಯ ವೀಣೆಯ ಸ್ವರ.. ಹೀಗೆ ಕಾಡಿರಬಹುದೇನೋ? ತಮ್ಮ ಹೃದಯಕ್ಕೆ ಹತ್ತಿರ ಇರುವವರ ಯಾವುದೋ ಒಂದು ಗುಣ, ಅಭ್ಯಾಸ ನಮ್ಮನ್ನು ಅಮಲಿನಲ್ಲಿ ತೇಲಿಸುವ ಮಹಾಶಕ್ತಿಯನ್ನೇ ಹೊಂದಿರುತ್ತದೆ. ಬೇಕಿದ್ರೆ ಟೆಸ್ಟ್ ಮಾಡಿ!
ನಾನು ಮತ್ತೆ ಅವಳ ತೋಳುಗಳಲ್ಲಿ ಸಿಕ್ಕು, ಅವಳು ಹಾಡುವ ಹಾಡುಗಳನ್ನು ಕೇಳಬೇಕು.. ಅದಕ್ಕಾಗಿ ಮತ್ತೆ ಚೈತ್ರವೊಂದು ಬರಲಿ ಎಂಬ ಬಯಕೆ ನನ್ನದು. ಪ್ರೇಮ ಮಾಮರದ ಚಿಗುರು ತಿಂದು ಮತ್ತೆ ಅವಳು ಕೋಗಿಲೆಯಂತೆ ಹಾಡಬೇಕು. ಅದು ನನ್ನ ಕಿವಿಗಳಿಗೆ ಬಿದ್ದು, ಒಲವು ಮತ್ತೆ ಜೀವಂತವಾಗಬೇಕು ಎಂಬ ಬಯಕೆ. ಆ ಒಂದು ಚೈತ್ರಕ್ಕೆ ಅದೆಷ್ಟು ಜನ್ಮ ಕಾಯಬೇಕೋ ಗೊತ್ತಿಲ್ಲ..! ಹಾಗಂತ ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಎದೆಯ ವೇದಿಕೆಯನ್ನು ಸಿಂಗರಿಸಿ ಮತ್ತಷ್ಟೂ ಪ್ರೇಮಗೀತೆಗಳಿಗಾಗಿ ಕಾಯುತ್ತಿದ್ದೇನೆ. ಅವಳು ಹುಣ್ಣಿಮೆಯ ಬೆಳದಿಂಗಳಂತೆ ಮತ್ತೆ ಬರುತ್ತಾಳೆ.. ಪಾರಿಜಾತದ ಕಂಪಿನ ಧ್ವನಿಯಲ್ಲಿ ಹಾಡನ್ನು ಹಾಡುತ್ತಾಳೆ! ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ಸದಾ ನಿನ್ನ ಬರುವಿಕೆಗೆ ಕಾಯುವ
– ಗೋಪಾಲಕೃಷ್ಣ